ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ: ಅದ್ವಿಕಾ ಶೆಟ್ಟಿ
ಉದ್ಯಾವರ, ನ.19: ಪ್ರತಿಯೊಬ್ಬ ಮಗುವಿನಲ್ಲಿ ಯಾವುದಾದರೊಂದು ಪ್ರತಿಭೆ ಇಧ್ದೇ ಇರುತ್ತದೆ. ಅದಕ್ಕೆ ಸರಿಯಾದ ಪ್ರೋತ್ಸಾಹ ದೊರೆತರೆ ಮಾತ್ರ ಅದು ಬೆಳಗಲು ಸಾಧ್ಯ. ಮೊದಲು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಝೀ ಟಿವಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಹಾಗೂ ಕಲರ್ಸ್ ಕನ್ನಡ ಡ್ಯಾನ್ಸಿಂಗ್ ಸ್ಟಾರ್ ಪ್ರತಿಭೆ, ತುಳುವ ಸಿರಿ ಪ್ರಶಸ್ತಿ ಪುರಸ್ಕೃತೆ ಬೇಬಿ ಅದ್ವಿಕಾ ಶೆಟ್ಟಿ ಹೇಳಿದ್ದಾರೆ.
ಉದ್ಯಾವರ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜವಾಹರ್ ಲಾಲ್ ನೆಹರು ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯ ಅಂಗವಾಗಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ಶನಿವಾರ ನಡೆದ ಏಳನೇ ವರ್ಷದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ ‘ಯುಎಫ್‌ಸಿ ಮಕ್ಕಳ ಹಬ್ಬ-2016’ನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.
ವಿದ್ಯಾರ್ಥಿಗಳ ಜೀವನದಲ್ಲಿ ಕೇವಲ ಲಿತಾಂಶ, ಅಂಕ ಮಾತ್ರ ಮಹತ್ತರ ಸ್ಥಾನ ಗಳಿಸುವುದಲ್ಲ. ಕಲಾ ಮಾಧ್ಯಮಗಳು ಸಹ ವಿದ್ಯಾರ್ಥಿಗಳ ಬದುಕಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಕಲಿಕೆಯಲ್ಲೂ ಮುಂದಿರುತ್ತಾರೆ. ಅದು ಕಲಿಕೆಗೆ ಪೂರಕವೇ ಹೊರತು ತೊಡಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮಕ್ಕಳ ಕಲಾ ಪ್ರತಿಭೆಗಳು ವಿಕಾಸಗೊಳ್ಳಲು ಇಂತಹಾ ಮಕ್ಕಳ ಸಾಂಸ್ಕೃತಿಕ ಹಬ್ಬ ಪೂರಕವಾಗಿದೆ. ಅಧ್ವಿಕಾಳ ಪ್ರತಿಭೆ ಹೊರ ಹೊಮ್ಮಲು ಅವರ ಹೆತ್ತವರು ಆಕೆಗೆ ಕೊಟ್ಟ ಪ್ರೋತ್ಸಾಹ ಮತ್ತು ಅವಕಾಶ ಮುಖ್ಯವಾಗಿದೆ. ಇದನ್ನು ಮಾದರಿಯಾಗಿಟ್ಟುಕೊಂಡು ಹೆತ್ತವರು ಮಕ್ಕಳನ್ನು ಪ್ರೋತ್ಸಾಹಿಸಿ ಬೆಳೆಸ ಬೇಕು ಎಂದರು.
ಅತಿಥಿಗಳಾಗಿ ಉದ್ಯಾವರ ಗ್ರಾಪಂ ಅದ್ಯಕ್ಷೆ ಸುಗಂಧಿ ಶೇಖರ್, ಉಪಾದ್ಯಕ್ಷ ರಿಯಾಝ್ ಪಳ್ಳಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಕುಮಾರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್. ಭಂಡಾರಿ, ಶರತ್ ಕುಮಾರ್ ಉಪಸ್ಥಿತರಿಧ್ದರು.
ಉದ್ಘಾಟಕಿ ಅದ್ವಿಕಾ ಶೆಟ್ಟಿ ಅವರನ್ನು ಸಂಸ್ಥೆ ಮತ್ತು ಮಕ್ಕಳ ಪರವಾಗಿ ಶಾಸಕ ವಿನಯ ಕುಮಾರ್ ಸೊರಕೆ ಸಂಮಾನಿಸಿದರು. ಸಂಸ್ಥೆಯ ಅದ್ಯಕ್ಷ ಯು. ಆರ್. ಚಂದ್ರಶೇಖರ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ದರ್ಶಿ ತಿಲಕ್‌ರಾಜ್ ಸಾಲ್ಯಾನ್ ವಂದಿಸಿದರು. ಹಿರಿಯ ಸದಸ್ಯ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.