ಪರವಾನಿಗೆ ರಹಿತ ಕೊಳವೆಬಾವಿ : ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ಷೇಪ

Update: 2016-11-19 12:29 GMT

ಸುಳ್ಯ, ನ.19: ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಎನ್.ಎಂ.ಗಣೇಶ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಎಸ್ಸೈ ಚಂದ್ರಶೇಖರ್, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು, ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಕುಮಾರ್, ಹೆಡ್‌ಕಾನ್‌ಸ್ಟೇಬಲ್ ನಾರಾಯಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ನಗರ ಪಂಚಾಯತ್ ಸದಸ್ಯ ಗೋಕುಲ್‌ದಾಸ್ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದು, ಅದನ್ನು ರದ್ದು ಮಾಡಲು ಹಿಂದಿನ ಸಭೆಗಳಲ್ಲಿ ಆಗ್ರಹಿಸಲಾಗಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸಂಜಯಕುಮಾರ್ ಆಕ್ಷೇಪಿಸಿದರು. ಒಂದು ತಿಂಗಳ ಅವಕಾಶ ನೀಡಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಉತ್ತರಿಸಿದರು. ಡಿಸಿ ಮನ್ನಾ ಜಮೀನು ಸರ್ವೆ ಮಾಡುವ ಸಂದರ್ಭ ಹೋರಾಟ ಸಮಿತಿಯವರನ್ನು ಕರೆಯುವುದಿಲ್ಲ ಎಂದು ಅಚ್ಚುತ ಮಲ್ಕಜೆ ಆರೋಪಿಸಿದರು.

ತಾಲೂಕಿನಲ್ಲಿ 764 ಡಿಸಿ ಮನ್ನಾ ಜಮೀನುಗಳಿದ್ದು, ಅದರಲ್ಲಿ 476 ಕಡೆಗಳಲ್ಲಿ ಪರಿಶಿಷ್ಟರ ವಶದಲ್ಲಿದೆ. 68 ಕಡೆ ಇತರರು ಅತಿಕ್ರಮಣ ಮಾಡಿದ್ದಾರೆ. 18 ಕಡೆಗಳಲ್ಲಿ ಸಂಘ-ಸಂಸ್ಥೆಗಳು ಅತಿಕ್ರಮಣ ಮಾಡಿವೆ ಎಂದು ತಹಶೀಲ್ದಾರ್ ಹೇಳಿದರು.

ಸುಬ್ರಹ್ಮಣ್ಯ ಅಂಗನವಾಡಿ ಜಮೀನು ವಿವಾದದಲ್ಲಿದ್ದು, ಅನುದಾನ ಹಿಂದಕ್ಕೆ ಹೋಗದಂತೆ ವ್ಯವಸ್ಥೆ ಮಾಡುವಂತೆ ಆನಂದ ಬೆಳ್ಳಾರೆ ಆಗ್ರಹಿಸಿದರು. ಬದಲಿ ನಿವೇಶನದ ವ್ಯವಸ್ಥೆ ಆದರೆ ಕಾಮಗಾರಿಯನ್ನು ಆರಂಭಿಸಬಹುದು ಎಂದು ಇಒ ಉತ್ತರಿಸಿದರು. ಗೌರಿಹೊಳೆಗೆ ಅಕ್ರಮವಾಗಿ ಮಣ್ಣು ಸುರಿದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆನಂದ ಬೆಳ್ಳಾರೆ ಆಗ್ರಹಿಸಿದರು.

ಗುತ್ತಿಗಾರು ಗ್ರಾಮದಲ್ಲಿ ಖಾಸಗಿಯವರೊಬ್ಬರು ಪರವಾನಿಗೆ ಇಲ್ಲದೆ ಕೊಳವೆ ಬಾವಿ ಕೊರೆಸುತ್ತಿರುವ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿರುವ ವಿಚಾರ ಪರಿಶಿಷ್ಟ ಜಾತಿ-ಪಂಗಡದ ಕುಂದುಕೊರತೆ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸ್ಥಳಕ್ಕೆ ಕಂದಾಯ, ಪೊಲೀಸ್ ಇಲಾಖೆ ಹಾಗೂ ಪಿಡಿಒ ಆಗಮಿಸಿ ಕಾಮಗಾರಿ ತಡೆದು ಲಾರಿಯನ್ನು ಠಾಣೆಗೆಂದು ಕೊಂಡೊಯ್ದರು. ಆದರೆ ಲಾರಿಯನ್ನು ಅರ್ಧದಲ್ಲೇ ಪೊಲೀಸರು ಬಿಟ್ಟಿದ್ದು ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ಆರೋಪಿಸಿದರು.

ಕಳಂಜ ಗ್ರಾಮದಲ್ಲಿ ಸರ್ವೆ ನಂಬರ್ 52ರಲ್ಲಿ 82 ಸೆಂಟ್ಸ್ ಜಮೀನು ದಲಿತರಿಗೆ ಮಂಜೂರಾಗಿದ್ದು, ಅಲ್ಲಿ ಬೇರೆಯವರು ಮನೆ ಕಟ್ಟಿಕೊಂಡಿದ್ದಾರೆ. ಬೆಳ್ಳಾರೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆನಂದ ಬೆಳ್ಳಾರೆ ದೂರಿದರು. ಉಬರಡ್ಕದಲ್ಲಿ ಸರ್ವೇ ನಂಬರ್ 112ರಲ್ಲಿ ಸರಕಾರಿ ಜಮೀನು ಅತಿಕ್ರಮಣ ಆಗಿದ್ದು, ಅದನ್ನು ಸ್ವಾಧೀನಪಡಿಸಿ ಪರಿಶಿಷ್ಟರಿಗೆ ನಿವೇಶನಕ್ಕೆ ಕಾಯ್ದಿರಿಸುವಂತೆ ಅಚ್ಚುತ ಮಲ್ಕಜೆ ಆಗ್ರಹಿಸಿದರು.

ಗುತ್ತಿಗಾರಿನಲ್ಲಿ ಸ್ಮಶಾನಕ್ಕೆ ಕಾಯ್ದಿರಿಸಿದ ಜಮೀನ್ನು ಅತಿಕ್ರಮಿಸಿ ಅಲ್ಲಿ ರಬ್ಬರ್ ಗಿಡಗಳನ್ನು ನೆಡಲಾಗಿದೆ ಎಂದು ಅಚ್ಚುತ ಗುತ್ತಿಗಾರು ಆಗ್ರಹಿಸಿದರು. ಪರಿಶೀಲನೆ ಮಾಡಿ ಅಗತ್ಯ ಬಿದ್ದರೆ ಪೊಲೀಸರ ಸಹಕಾರ ಪಡೆದು ಅದನ್ನು ತೆರವು ಮಾಡುವಂತೆ ಪಿಡಿಒಗೆ ಇಒ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News