ಉದ್ಯಮಿಗಳ ಸಾಲ ಮನ್ನಾ ಮಾಡಿರುವುದು ಕ್ಷಮಿಸಲಾಗದ ನಿರ್ಧಾರ: ಎಸ್‌ಡಿಪಿಐ

Update: 2016-11-19 13:43 GMT

ಮಂಗಳೂರು, ನ.19: ಕಳೆದ ಏಳು ದಿನಗಳಿಂದ ಇಡೀ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದು ಬಿದ್ದಿದ್ದು, ಜನಸಾಮಾನ್ಯರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಕೇಂದ್ರ ಸರಕಾರ ಅನಗತ್ಯ ಮತ್ತು ಅವೈಜ್ಞಾನಿಕವಾಗಿ ಯಾವುದೇ ಪೂರ್ವ ತಯಾರಿ ಹಾಗೂ ಜನಾಭಿಪ್ರಾಯ ಪಡೆಯದೆ ಏಕಾಏಕಿ ನೋಟು ಬದಲಾವಣೆ ಕುರಿತು ಏಕಾಧಿಪತ್ಯ ಆದೇಶ ಹೊರಡಿಸಿ ಜನರಿಗೆ ತೊಂದರೆ ನೀಡುವಂತಹಾ ಮರಣ ಶಾಸನ ಜಾರಿಗೆ ತಂದಿರುವುದು ಅತ್ಯಂತ ಖಂಡನೀಯ. ಈ ಮರಣ ಶಾಸನದಿಂದ ಜನ ತತ್ತರಿಸಿದ್ದಾರೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಜನರು ತಾವು ದುಡಿದು ಶೇಖರಿಸಿದ ಅಲ್ಪಸ್ವಲ್ಪ ಹಣವನ್ನು ಪಡೆಯಲು ಬ್ಯಾಂಕ್‌ಗಳ ಮುಂದೆ ನಿಂತಿರುವ ಸಾಲು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಮಟ್ಟಕ್ಕೆ ಭಾರತದಲ್ಲಿ ಕುಸಿದಿದೆ ಎಂದು ಅರ್ಥೈಸಿಕೊಳ್ಳಬಹುದು. ಹಣ ಪಡೆಯಲು ತೆಗೆದುಕೊಳ್ಳಲು ಮಾಡಿದ ಹರಸಾಹಸಕ್ಕೆ ದೇಶದಲ್ಲಿ 34 ಮಂದಿ ಬಲಿಯಾಗಿದ್ದಾರೆ. ಈ ರೀತಿ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕಾಗಿತ್ತು. ಆದರೆ ಕೇಂದ್ರ ಸರಕಾರ ಗಾಯದ ಮೇಲೆ ಬರೆ ಎಳೆದಂತೆ ಕೋಟ್ಯಾಧಿಪತಿ ಉದ್ಯಮಿಗಳ 7,016 ಕೋಟಿ ಸಾಲ ಮನ್ನಾ ಮಾಡಿರುವುದು ಈ ದೇಶದ ದುರಂತವೇ ಸರಿ. ಸಾವಿರಾರು ಕೋಟಿ ಸಾಲ ಮಾಡಿ ದೇಶದಿಂದ ಓಡಿ ದೇಶದ್ರೋಹ ಬಗೆದ ವಿಜಯಮಲ್ಯರನ್ನು ಸರಕಾರ ಸೆರೆ ಹಿಡಿದು ಹಣ ಹಿಂಪಡೆದು ಜೈಲಿಗೆ ಹಾಕಬೇಕಾಗಿತ್ತು. ಆದರೆ ದೇಶಕ್ಕೆ ದ್ರೋಹ ಬಗೆದವರ ಸಾಲ ಮನ್ನಾ ಮಾಡಿ ಕೇಂದ್ರ ಸರಕಾರ ಭಾರತೀಯರಿಗೆ ದ್ರೋಹವೆಸಗಿದೆ.

ಮತ್ತೊಂದು ಕಡೆ ರಾಜ್ಯದಲ್ಲಿ ಸಾಲವನ್ನು ಮರುಪಾವತಿಸಲಾಗದೇ ನಾಡಿನ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ. ಸರಕಾರ ಇಂತಹ ಅಸಹಾಯಕ ಹಾಗೂ ಅಮಾಯಕ ರೈತರ ಮೇಲೆ ಕಠಿಣ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ತಾವು ರೈತವಿರೋಧಿ ಹಾಗೂ ಉದ್ಯಮಿಗಳ ಪರ ಎಂದು ತೋರಿಸಿಕೊಂಡಿದೆ. ಹಲವಾರು ವರ್ಷಗಳಿಂದ ದುಡಿದು ಶೇಖರಿಸಿಟ್ಟಿದ್ದ ತಮ್ಮ ಹಣ ಠೇವಣಿ ಮಾಡಿದರೆ ಅದಾಯ ತೆರಿಗೆ ಇಲಾಖೆಯವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಜನಸಾಮಾನ್ಯರು ಭಯದಲ್ಲಿ ಜೀವಿಸುವಂತಾಗಿದೆ. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಕಾರ್ಯರೂಪಕ್ಕೂ ಸಹ ಇಳಿದಿದೆ. ಆದರೆ ಇಲ್ಲಿರುವ ಗಣಿಧಣಿಗಳ ಬಗ್ಗೆ ಆದಾಯ ಇಲಾಖೆ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗುತಿಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 500 ಕೋಟಿ ರೂ. ಖರ್ಚು ಮಾಡಿ ಮದುವೆ ಮಾಡುವವರು ಒಂದು ಕಡೆ. ಆಹಾರ ಇಲ್ಲದೆ, ಉದ್ಯೋಗ ಇಲ್ಲದೆ, ಪಡೆದಿರುವ ಸಣ್ಣಪುಟ್ಟ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಡ ಭಾರತೀಯರು ಒಂದು ಕಡೆ. ಇಂತಹ ಆರ್ಥಿಕ ಅಸಮಾನತೆ ಬೆಳೆಯುತ್ತಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.

ಈ ಆರ್ಥಿಕ ಅಸಮಾನತೆ ಹೋಗಲಾಡಿಸುವುದು ಸರಕಾರಗಳ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸರಕಾರ ಕೂಡಲೆ ಕೋಟ್ಯಾಧಿಪತಿ ಉದ್ಯಮಿಗಳ ಸಾಲ ಮನ್ನಾ ಆದೇಶವನ್ನು ಹಿಂಪಡೆಯಬೇಕು. ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಹಣಕಾಸು ಸಚಿವರು ನೋಟು ಬದಲಾವಣೆ ಕುರಿತು ತಾವು ಮಾಡಿರುವ ಪ್ರಮಾದವನ್ನು ಒಪ್ಪಿಕೊಂಡು ಜನತೆ ಎದುರಿಸುತ್ತಿರುವ ತೊಂದರೆಯನ್ನು ಪರಿಹರಿಸಿ ಜನಸಾಮಾನ್ಯರ ಜೀವನ ಸೂಸೂತ್ರವಾಗಿ ನಡೆಯುವಂತೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News