ದೇಶದಲ್ಲಿ ಏಕರೂಪದ ಧಾರ್ಮಿಕ ಕಾನೂನು ಅಸಾಧ್ಯ: ಎಸ್.ಬಿ. ದಾರಿಮಿ

Update: 2016-11-19 13:36 GMT

ಪುತ್ತೂರು, ನ.19: ವಿವಿಧ ಜಾತಿ ಜನಾಂಗಗಳು ಒಟ್ಟಾಗಿ ಬದುಕುತ್ತಿರುವ ಭಾರತದಲ್ಲಿ ಪ್ರತಿಯೊಂದು ಧರ್ಮಗಳಿಗೂ ಅದರದೇ ಆಗಿರುವ ತತ್ವ ಸಿದ್ದಾಂತಗಳಿದ್ದು, ಇಲ್ಲಿ ಏಕರೂಪದ ಧಾರ್ಮಿಕ ಕಾನೂನು ಅನುಷ್ಠಾನಗೊಳಿಸುವುದು ಅಸಾಧ್ಯವಾಗಿದೆ ಎಂದು ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್. ಬಿ ಮುಹಮ್ಮದ್ ದಾರಿಮಿ ಅಭಿಪ್ರಾಯಪಟ್ಟರು.

ಅವರು ಪುತ್ತೂರಿನ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಶರೀಅತ್ ಸಂರಕ್ಷಣಾ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ತಲಾಕ್ ಪದ್ದತಿ ದುರ್ಬಳಕೆಯಾಗದಂತೆ ಇಸ್ಲಾಮ್ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಂಡಿದ್ದು, ಮುಸ್ಲಿಮ್ ದಂಪತಿಯ ನಡುವೆ ವಿರಕ್ತಿ ಮೂಡಿದಾಗ ಕೊನೆಯ ಅಸ್ತ್ರವಾಗಿ ತಲಾಕ್ ನೀಡಲು ಮುಸ್ಲಿಮ್ ಧಾರ್ಮಿಕ ಶರೀಅತ್ ಅವಕಾಶ ನೀಡಿದೆ. ಇದರಿಂದಾಗಿ ಮಹಿಳೆಯರ ನೋವು, ದು:ಖ, ದುಮ್ಮಾನಗಳು ಶಮನವಾಗುತ್ತದೆ. ಮಹಿಳೆಯರ ಆತ್ಮಹತ್ಯೆಯಂತಹ ಪ್ರಕರಣಗಳು ನಡೆಯುವುದನ್ನು ಇದು ತಡೆಯುತ್ತದೆ. ಇಲ್ಲದಿದ್ದಲ್ಲಿ ಪ್ರಧಾನಿ ಮೋದಿಯವರ ಪತ್ನಿಯಂತೆ ಎಲ್ಲಾ ಮಹಿಳೆಯರು ಬದುಕುವ ಸ್ಥಿತಿ ನಿರ್ಮಾಣವಾಗಬಹುದು. ಮಹಿಳೆಯರ ಮೇಲೆ ಪರೋಕ್ಷ ಮತ್ತು ಪ್ರತ್ಯಕ್ಷ ದುಷ್ಪರಿಣಾಮ ಬೀರುವ ಮೂಢನಂಬಿಕೆ, ಮದ್ಯಪಾನದಂತಹ ಸಾಮಾಜಿಕ ಪಿಡುಗುಗಳ ಮೇಲೆ ನಿಯಂತ್ರಣ ಹೇರಲು ಹಿಂಜರಿಯುತ್ತಿರುವ ಶಕ್ತಿಗಳು ಇದೀಗ ತಲಾಕ್ ವಿಚಾರದಲ್ಲಿ ನಿಯಂತ್ರಣಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಮಾಡನ್ನೂರು ನೂರುಲ್ ಹುದಾ ಕಾಲೇಜಿನ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಮಾತನಾಡಿ, ಭಾರತದಲ್ಲಿ ಜಾರಿಗೆ ತರಲು ಉದೇಶಿಸಲಾಗಿರುವ ಸಮಾನ ನಾಗರಿಕ ಸಂಹಿತೆ ಸಂವಿಧಾನ ವಿರೋಧಿಯಾಗಿದ್ದು, ಈ ಕಾನೂನು ಜಾರಿ ಮಾಡುವ ಮೂಲಕ ಕೇಂದ್ರ ಸರಕಾರ ಸಂವಿಧಾನವನ್ನು ಬುಡಮೇಲು ಮಾಡಲು ಮುಂದಾಗಿದೆ. ತಲಾಕ್ ಮುಸ್ಲಿಂ ಮಹಿಳೆಯರ ಪಾಲಿಗೆ ವರದಾನವಾಗಿದೆ. ತಲಾಕ್ ಪದ್ದತಿ ಪುರುಷರಿಗಿದ್ದರೆ ಮಹಿಳೆಯರಿಗೂ ಇಸ್ಲಾಂ ಪಸ್ಕ್ ಮೂಲಕ ಬೇರ್ಪಡಲು ಅವಕಾಶ ನೀಡಿದೆ. ಈ ಕಾರಣಕ್ಕೆ ಇಂದು ಮುಸ್ಲಿಮರಲ್ಲಿ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿಲ್ಲ. ದೇಶದ ಮುಸ್ಲಿಮರು ಸಂವಿಧಾನವನ್ನು ರಕ್ಷಣೆ ಮಾಡಲು ಸಿದ್ದರಿದ್ದು ಯಾವುದೇ ಕಾರಣಕ್ಕೂ ಸಮಾನ ನಾಗರಿಕ ಸಂಹಿತೆಯನ್ನು ಸ್ವೀಕರಿಸಲು ಸಿದ್ಧರಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಂಇಯಯತುಲ್ ಉಲಮಾದ ಅಧ್ಯಕ್ಷ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಮಾತನಾಡಿ, ಬಹುಸಂಸ್ಕೃತಿ ಹೊಂದಿರುವ ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ಅವರವರ ಧರ್ಮಾನುಸಾರ ಬದುಕಲು ಸಂವಿಧಾನದಲ್ಲಿ ಅವಕಾಶ ನೀಡಿದ್ದು ಅದನ್ನು ಬದಲಾವಣೆ ಮಾಡಲು ಯಾರಿದಂಲೂ ಸಾಧ್ಯವಿಲ್ಲ. ಸರಕಾರ ಮದ್ಯಪಾನ, ಬಡತನ, ಸಂಪೂರ್ಣ ಸಾಕ್ಷರತೆ, ಸೇರಿದಂತೆ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟವನ್ನು ಮಾಡಬೇಕು ಎಂದು ಹೇಳಿದರು.

ಜಿ.ಪಂ. ಸದಸ್ಯ ಎಂ. ಎಸ್. ಮುಹಮ್ಮದ್, ಕುಂಬ್ರ ಕೆಐಸಿ ಮ್ಯಾನೇಜರ್ ಕೆ.ಆರ್. ಹುಸೈನ್ ದಾರಿಮಿ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ, ವಕ್ಪ್ ಸದಸ್ಯ ಪಿ.ಬಿ. ಹಸನ್ ಹಾಜಿ, ಹಾಶಿಂ ತಂಙಳ್ ಕೊರಿಂಗಿಲ, ಇಸಾಕ್ ತೋಡಾರು, ಅಬ್ದುಲ್ ಹನೀಫ್ ಕೊರಿಂಗಿಲ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ, ತಾ.ಪಂ. ಮಾಜಿ ಸದಸ್ಯ ಮುಹಮ್ಮದ್ ಬಡಗನ್ನೂರು, ಉಸ್ಮಾನ್ ಪೈಝಿ ತೋಡಾರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಕಲ್ಲೇಗ ಜುಮಾ ಮಸೀದಿ ಅಧ್ಯಕ್ಷ ಬಿ.ಎ. ಶಕೂರ್ ಹಾಜಿ, ಮಮ್ಮಾಲಿ ಹಾಜಿ ಬೆಳ್ಳಾರೆ, ಹಿರಾ ಅಬ್ದುಲ್ ಖಾದರ್ ಹಾಜಿ, ವಿ.ಎಚ್. ಅಬ್ದುಲ್ ಶುಕೂರ್ ಹಾಜಿ, ಕೂರ್ನಡ್ಕ ಮುದರ್ರಿಸ್ ಅಬೂಬಕರ್ ಸಿದ್ದೀಕ್ ಜಲಾಲಿ, ಅಬ್ದುಲ್ ಅಝೀರ್ ಬುಶ್ರಾ ಉಪಸ್ಥಿತರಿದ್ದರು.

ಉಮ್ಮರ್ ದಾರಿಮಿ ಸಾಲ್ಮರ ಸ್ವಾಗತಿಸಿ, ಕೆ.ಎಂ ಎ ಕೊಡುಂಗಾಯಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News