ಬ್ಯಾಂಕ್‌ನಿಂದ ಹೊರ ಬಿದ್ದಾಗ ಜೇಬು 15 ಕಿ.ಗ್ರಾಂ ಭಾರವಾಗಿತ್ತು!
ಹೊಸದಿಲ್ಲಿ, ನ.19: ಬ್ಯಾಂಕಿನ ಮುಂದೆ 4 ತಾಸುಗಳ ಕಾಲ ಸರದಿಯಲ್ಲಿ ನಿಂತ ಬಳಿಕ 38ರ ಹರೆಯದ ಇಮ್ತಿಯಾಝ್ ಆಲಂ ಎಂಬಾತನ ಜೇಬು ಅಕ್ಷರಶಃ ಭಾರವಾಗಿತ್ತು! ಆತನಿಗೆ ಹಳೆ ನೋಟುಗಳ ಬದಲಿಗೆ ಬ್ಯಾಂಕ್‌ನವರು ರೂ. 20 ಸಾವಿರ ವೌಲ್ಯದ 10 ರೂಪಾಯಿಯ ನಾಣ್ಯಗಳನ್ನು ನೀಡಿದ್ದುದು ಇದಕ್ಕೆ ಕಾರಣ.
ಸಾರ್ವಜನಿಕ ಸಂಪರ್ಕಾಧಿಕಾರಿಯ ವೃತ್ತಿಯಲ್ಲಿರುವ ಆಲಂ, ತನ್ನಲ್ಲಿದ್ದ ನಿಷೇಧಿತ ರೂ. 500 ಹಾಗೂ ರೂ. 1000ದ ನೋಟುಗಳ ವಿನಿಮಯಕ್ಕಾಗಿ ಶುಕ್ರವಾರ ಜಾಮಿಯಾ ಸಹಕಾರಿ ಬ್ಯಾಂಕ್‌ನಲ್ಲಿ 4 ತಾಸುಗಳ ಕಾಲ ಸರತಿಯ ಸಾಲಿನಲ್ಲಿ ನಿಂತಿದ್ದರು. ಆತನಿಗೆ ಬ್ಯಾಂಕ್‌ನ ಮ್ಯಾನೇಜರ್, ನಗದು ಸಾಕಷ್ಟಿಲ್ಲ. ರೂ. 2 ಸಾವಿರ ಕೊಡಬಹುದು ಎಂದಿದ್ದರು. ಆದರೆ, ತನಗೆ ಹೆಚ್ಚಿನ ಮೊತ್ತ ಬೇಕೆಂದು ಆಲಂ ವಿವರಿಸಿದಾಗ, ಅವರು ಆತನ ಕೋರಿಕೆಗೆ ಒಪ್ಪಿದ್ದರು. ಆದರೆ, ಮೊತ್ತವನ್ನು ರೂ. 10ರ ನಾಣ್ಯಗಳಲ್ಲಿ ನೀಡುವ ಶರತ್ತನ್ನು ಮ್ಯಾನೇಜರ್ ವಿಧಿಸಿದ್ದರು.
ಆಲಂ, ರೂ. 20,000ಗಳಿಗೆ ರೂ. 10ರ ನಾಣ್ಯಗಳನ್ನು ಪಡೆಯಲು ಒಪ್ಪಿದರು. ತಾನು ಸಂತೋಷದಿಂದಲೇ ಒಪ್ಪಿದೆ. ಕನಿಷ್ಠ ಅದು ಚಲಾವಣೆಯಲ್ಲಿರುವ ನಾಣ್ಯವಲ್ಲವೇ ಎಂದು ಆಲಂ ಹೇಳಿದ್ದಾರೆ.
ಅವರು, ಈಗಾಗಲೇ ಹೊಟೇಲ್ ಬಿಲ್ ಹಾಗೂ ಕ್ಯಾಬ್ ಬಾಡಿಗೆಗಾಗಿ ಕೆಲವು ನಾಣ್ಯಗಳನ್ನು ಖರ್ಚು ಮಾಡಿದ್ದಾರೆ. ಅಲ್ಲದೆ ಅವರು ರೂ. 2 ಸಾವಿರದ ಹೊಸ ನೋಟಿಗೆ ಚಿಲ್ಲರೆಯನ್ನೂ ಕೊಡುತ್ತಿದ್ದಾರೆ.