ಇಸ್ಲಾಂ ಸ್ವೀಕರಿಸಿದ ಯುವಕನ ಬರ್ಬರ ಹತ್ಯೆ
ಮಲಪ್ಪುರಂ , ನ. 19 : ಆರು ತಿಂಗಳ ಹಿಂದೆ ಇಸ್ಲಾಂ ಸ್ವೀಕರಿಸಿದ 32 ವರ್ಷದ ಯುವಕನನ್ನು ಇಲ್ಲಿನ ಕೊಡಿಂಹಿ ಎಂಬಲ್ಲಿನ ಫಾರೂಕ್ ನಗರ್ ನಲ್ಲಿ ಶನಿವಾರ ಮುಂಜಾನೆ ಬರ್ಬರವಾಗಿ ಕೊಚ್ಚಿ ಕೊಲೆಮಾಡಲಾಗಿದೆ. ಕೊಡಿಂಹಿ ಯ ಅನಂತನ್ ನಾಯರ್ ಅವರ ಪುತ್ರ ಫೈಸಲ್ ಪಿ. ಅಲಿಯಾಸ್ ಅನೀಶ್ ಕುಮಾರ್ ಕೊಲೆಯಾದವರು.
ಅವರ ಮೃತದೇಹ ಬೆಳಗ್ಗೆ ನಾಲ್ಕು ಗಂಟೆಗೆ ರಸ್ತೆ ಬದಿ ಬಿದ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ಮೃತದೇಹದ ಸಮೀಪವೇ ರಿಕ್ಷಾವೊಂದು ಇತ್ತು.
ಸ್ಥಳೀಯರ ಪ್ರಕಾರ ಫೈಸಲ್ ಗೆ ಇಸ್ಲಾಂ ಸ್ವೀಕರಿಸಿದ ಬಳಿಕ ಸ್ವತಃ ಕುಟುಂಬ ಸದಸ್ಯರಿಂದಲೇ ಬೆದರಿಕೆ ಬಂದಿತ್ತು. ಅತ್ಯಂತ ಭೀಕರವಾಗಿ ಅವರನ್ನು ಕೊಚ್ಚಿ ಹಾಕಲಾಗಿದ್ದು ಫೈಸಲ್ ರ ಹಣೆ ಬಹುತೇಕ ತೆರೆದಿತ್ತು ಹಾಗು ಅವರ ಕರುಳುಗಳು ಹೊರ ಬಂದಿದ್ದವು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಗಲ್ಫ್ ನಲ್ಲಿ ಕೆಲಸದಲ್ಲಿದ್ದ ಫೈಸಲ್ ಆರು ತಿಂಗಳ ಹಿಂದೆ ಇಸ್ಲಾಮ್ ಸ್ವೀಕರಿಸಿದ್ದರು. ನಾಲ್ಕು ತಿಂಗಳ ಹಿಂದೆ ಅವರು ಊರಿಗೆ ಬಂದಿದ್ದರು. ಅವರ ಪತ್ನಿಯೂ ಇಸ್ಲಾಂ ಸ್ವೀಕರಿಸಿದ್ದು ಪೊನ್ನಾಣಿಯ ಮದ್ರಸಾವೊಂದರಲ್ಲಿ ಇಸ್ಲಾಮಿಕ್ ಅಧ್ಯಯನ ನಡೆಸುತ್ತಿದ್ದರು. ಇವರಿಗೆ ಮೂವರು ಮಕ್ಕಳಿದ್ದು ಕೊಡಿಂಹಿ ಯಲ್ಲಿ ಶಾಲೆಗೇ ಹೋಗುತ್ತಿದ್ದಾರೆ. ವಿಧಿ ವಿಜ್ಞಾನ ತಂಡ, ಶ್ವಾನ ಪದೇ ಹಾಗು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.