‘ಟ್ಯಾಲೆಂಟ್’ ವತಿಯಿಂದ ವಿವಿಧ ಸವಲತ್ತುಗಳ ವಿತರಣೆ

Update: 2016-11-19 13:51 GMT

ಮಂಗಳೂರು, ನ.19: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮೊಬೈಲ್ ಸರ್ಟಿಫಿಕೇಟ್, ಹೊಲಿಗೆ ಯಂತ್ರ, ವೀಲ್‌ಚೇರ್ ಮತ್ತು ತಳ್ಳುವ ಗಾಡಿ ವಿತರಣಾ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಎಸ್. ಕೊಟ್ಟಾರಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ, ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಬಿಲಾಲ್ ಮೊಯ್ದಿನ್ ಬೆಂಗರೆ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಗೌರವ ಕಾರ್ಯದರ್ಶಿ ಹಾಜಿ ಪಿ.ಬಿ.ಅಬ್ದುಲ್ ಹಮೀದ್, ಮಂಗಳೂರು ಮಾರ್ಕೆಟಿಂಗ್‌ನ ಆಡಳಿತ ನಿರ್ದೇಶಕ ಬಿ.ಬಶೀರ್, ಪಿ.ಎಸ್.ಬೀಡೀಸ್ ಮಾಲಕ ಹಾಜಿ ಪಿ.ಎಸ್ ಅಬ್ದುಲ್ ಹಮೀದ್, ಸ್ನೇಹಾಲಯದ ಸ್ಥಾಪಕ ಜೋಸೆಫ್ ಕ್ರಾಸ್ತಾ, ಟ್ಯಾಲೆಂಟ್ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ಬಿ.ಎ. ಅಕ್ಬರ್ ಅಲಿ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಆರ್‌ಎಫ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು ವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಬಂಟ್ವಾಳ ಮತ್ತು ದಾರಿಯಲ್ಲಿ ಬಿದ್ದು ಸಿಕ್ಕಿದ 386 ಗ್ರಾಂ ಚಿನ್ನವನ್ನು ಅದರ ಮಾಲಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಅಬ್ದುಲ್ ಹಮೀದ್ ನೀರಪಾದೆಯವರನ್ನು ಸನ್ಮಾನಿಸಲಾಯಿತು. ಮೊಬೈಲ್ ಟೆಕ್ನಿಶಿಯನ್ ಕೋರ್ಸನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ 26 ಮಂದಿ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. 2 ಹೊಲಿಗೆ ಯಂತ್ರ, 3 ವೀಲ್ ಚೇರ್ ಹಾಗೂ 1 ತಳ್ಳುವ ಗಾಡಿಯನ್ನು ಸರ್ವಧರ್ಮೀಯ ಫಲಾನುಭವಿಗಳಿಗೆ ವಿತರಿಸಲಾಯಿತು.

ಮೌಲಾನಾ ಹೈದರಾಲಿ ಕಿರಾಅತ್ ಪಠಿಸಿದರು. ಮುಹಮ್ಮದ್ ಯು.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ಮಜೀದ್ ತುಂಬೆ ವಂದಿಸಿದರು. ರಫೀಕ್ ಮಾಸ್ಟರ್ ಮತ್ತು ಅಸ್ಫರ್ ಬೆಂಗರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News