×
Ad

ರೂ. 1 ಕೋಟಿ ಮೌಲ್ಯದ ರೂ. 1000ದ ನೋಟು ಪತ್ತೆ ನಾಲ್ವರು ವಶಕ್ಕೆ

Update: 2016-11-19 19:35 IST

ಥಾಣೆ, ನ.19: ರೂ. 1 ಕೋಟಿ ಮಲ್ಯದ ರದ್ದಾಗಿರುವ ರೂ. 1000ದ ನೋಟುಗಳನ್ನು ನವಿ ಮುಂಬೈಯ ವಾಶಿಯಲ್ಲಿ ಲಕ್ಸುರಿ ಕಾರೊಂದರಿಂದ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.

ಖಚಿತ ಸುಳಿವಿನ ಆಧಾರದಲ್ಲಿ ಪೊಲೀಸರು ಬಲೆ ಬೀಸಿದ್ದರು. ನಿನ್ನೆ ಸಂಜೆ ಕಾರೊಂದು ಬಂದು ವಾಶಿಯ ಸೆಕ್ಟರ್ 28ರ ವಸತಿ ಸಂಕೀರ್ಣವೊಂದರ ಮುಂದೆ ನಿಂತಾಗ ಪೊಲೀಸರು ಕಾರಿನ ತಪಾಸಣೆ ನಡೆಸಿದರು. ಆಗ 2 ಚೀಲಗಳಲ್ಲಿ ರೂ. 1000 ಮುಖಬೆಲೆಯ ನೋಟುಗಳು ಪತ್ತೆಯಾದವೆಂದು ನವಿ ಮುಂಬೈ ಪೊಲೀಸ್‌ನ ಅಧಿಕೃತ ಪ್ರಕಟನೆಯೊಂದು ವಿವರಿಸಿದೆ.

ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರನ್ನು, ರಾಯ್ಗಡ ಜಿಲ್ಲೆಯ ಉರಾನ್‌ನ ಎಸ್ಟೇಟ್ ಏಜೆಂಟ್ ಪ್ರಸಾದ್ ಆರ್.ಪಾಟೀಲ್(36), ನವಿ ಮುಂಬೈಯ ಖಾರ್‌ಗಡದ ಕಟ್ಟಡ ನಿರ್ಮಾಪಕ ಹರಿಶ್ಚಂದ್ರ ಶಿಂದೆ(60), ಆಸ್ತಿ ಏಜೆಂಟ್ ಪ್ರಮೋದ್ ಪಡ್ಲೆ(43) ಹಾಗೂ ಭಾಯ್ಕಳದ ಜವುಳಿ ವ್ಯಾಪಾರಿ ಅವಿನಾಶ್ ಜೈಲ್(31) ಎಂದು ಗುರುತಿಸಲಾಗಿದೆಯೆಂದು ಇನ್ಸ್‌ಪೆಕ್ಟರ್ ಅಶೋಕ್ ರಜಪೂತ್ ತಿಳಿಸಿದ್ದಾರೆ.

ತಾವು ಹಳೆಯ ನೋಟುಗಳ ಬದಲಾವಣೆಗಾಗಿ ವಾಶಿಗೆ ಬಂದಿದ್ದೇವೆಂದು ಅವರು ವಿಚಾರಣೆಯ ವೇಳೆ ತಿಳಿಸಿದರಾದರೂ, ಹಣದ ಮೂಲ ಹಾಗೂ ಎಲ್ಲಿ ಬದಲಾಯಿಸಲು ಬಯಸಿದ್ದರೆಂಬುದನ್ನು ಬಾಯ್ಬಿಟ್ಟಿಲ್ಲವೆಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ರೂ. 10ಲಕ್ಷ ವೌಲ್ಯದ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಾಶಿ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News