ಶಿಕ್ಷಣ ನೀತಿಗೆ ತಿದ್ದುಪಡಿ ತರಬೇಕಿದೆ: ಡಾ. ಎಂ. ಮೋಹನ್ ಆಳ್ವ

Update: 2016-11-19 14:41 GMT

ಮೂಡುಬಿದಿರೆ, ನ.19: ಸರಕಾರಗಳು ಹಾಗೂ ಶಿಕ್ಷಣ ಕೇಂದ್ರಗಳು ಶಿಕ್ಷಣವನ್ನು ದಂಧೆಯಾಗಿ ಪರಿವರ್ತನೆಗೊಂಡಿದ್ದು, ಶೀಘ್ರ ಶಿಕ್ಷಣ ನೀತಿಗೆ ತಿದ್ದುಪಡಿ ತರಬೇಕಾದ ಅವಶ್ಯಕತೆ ಇದೆ ಎಂದು ಡಾ.ಎಂ. ಮೋಹನ್ ಆಳ್ವ ಹೇಳಿದರು.

ಆಳ್ವಾಸ್ ನುಡಿಸಿರಿಯ ಎರಡನೆ ದಿನದ ಕಾರ್ಯಕ್ರಮದಲ್ಲಿ ಪುಂಡಲೀಕ ಹಾಲಂಬಿ ಸಭಾಂಗಣದ ರತ್ನಾಕರ ಕುಲಕರ್ಣಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ‘ಶಿಕ್ಷಣ’ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.

ಶಿಕ್ಷಣ ವ್ಯಕ್ತಿಯ ಏಳಿಗೆಯಲ್ಲ. ಅದು ಸಮಾಜದ ಏಳಿಗೆಯಾಗಬೇಕು. ಇಡೀ ಜಗತ್ತು ಇಂದು ಪುಟ್ಟ ಗ್ರಾಮವಾಗಿದೆ. ಶಿಕ್ಷಣದ ವ್ಯವಸ್ಥೆ ಕಾಲ ಕಾಲಕ್ಕೆ ಬದಲಾಗಬೇಕಿದೆ. ರಾಜ್ಯ ಸರಕಾರ ಆಂಗ್ಲ ಮಾಧ್ಯಮಕ್ಕೆ ಕೊಡುವ ಸ್ಥಾನಮಾನಗಳನ್ನು ಕನ್ನಡ ಮಾಧ್ಯಮಕ್ಕೂ ನೀಡಬೇಕು ಎಂದು ನುಡಿದರು.

ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ ಒಂದು ಅಕ್ಷರವನ್ನು ಓದಲು ಬಾರದವರಿದ್ದಾರೆ. ಇದು ದುರಂತ. ಕನ್ನಡ ಮಾಧ್ಯಮ ಶಿಕ್ಷಣದ ನೀತಿ ರೂಪಿಸುವುದು ಇಂದು ಅತ್ಯಗತ್ಯವಾಗಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣದಿಂದಲೇ ಅಡಿಪಾಯ ಹಾಕಬೇಕು. ಹಾಗಾದರೆ ಮಾತ್ರ ಬಲಿಷ್ಠ ಸುಶಿಕ್ಷಿತ ಭಾರತ ನಿರ್ಮಾಣ ಸಾಧ್ಯ ಎಂದ ಅವರು, ಶಿಕ್ಷಣದ ನೀತಿ ಸೂತ್ರ ಸಿದ್ಧತೆಯಲ್ಲಿ ಸರಕಾರ ಶೀಘ್ರ ತೊಡಗಿಸಿಕೊಳ್ಳಬೇಕು ಎಂದರು.

ಕನ್ನಡ ಮಾಧ್ಯಮದ ಶಾಲೆಗಳು ನಿಂತ ನೀರಂತಾಗಿದ್ದು, ವೌಲ್ಯ ಕಳೆದುಕೊಂಡಿವೆ. ಇಂದು ಇಂಗ್ಲಿಷ್ ಮಾಧ್ಯಮಗಳು ಬೇರೆ ಬೇರೆ ರೂಪ ತಾಳುತ್ತವೆ. ಶಿಕ್ಷಣ ಇಂದು ವ್ಯಾಪಾರದ ದಂಧೆಯಾಗುತ್ತಿದೆ. ಇದನ್ನು ಕಂಡರೂ ಕಾಣದಂತೆ ಸರಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಸಿಬಿಎಸ್ಸಿ ಶಾಲೆಗಳು ಶಿಕ್ಷಣ ಕೊಡುವ ರೀತಿಯಲ್ಲಿ ಬದಲಾವಣೆಯನ್ನು ತಂದುಕೊಂಡಿವೆ. ಕನ್ನಡ ಮಾಧ್ಯಮದಲ್ಲೇ ಖಾಸಗಿ ಶಾಲೆಗಳನ್ನು ತೆರೆಯುವುದು ಅವಶ್ಯವಿದೆ ಎಂದರು.

ಇಂದಿನ ಕನ್ನಡ ಮಾಧ್ಯಮದ ಸ್ಥಿತಿ ಕಳಪೆ ಮಟ್ಟದಲ್ಲಿದ್ದು, ಇಂದು ಖಾಸಗಿ ಕಾಲೇಜುಗಳು ಉತ್ಕೃಷ್ಟ ಶಿಕ್ಷಣವನ್ನು ನೀಡುತ್ತಿವೆ. ಆದರೆ ಸರಕಾರವು ಇವುಗಳ ನಿಯಂತ್ರಿಸುತ್ತಿರುವುದು ದುರಂತ. ಮೊರಾರ್ಜಿ ದೇಸಾಯಿ ಕನ್ನಡ ಶಾಲೆಗಳನ್ನು ಸರಕಾರ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಆಳ್ವ, ಆಂಗ್ಲ ಮಾಧ್ಯಮದ ಶಾಲೆಗಳ ಸ್ಥಾಪನೆಗಿಂತ ಪ್ರಾದೇಶಿಕ ಕನ್ನಡ ಮಾಧ್ಯಮದ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಅದನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿಯನ್ನು ಅಧಿಕಾರಿಗಳು, ರಾಜಕಾರಣಿಗಳು ನಿರ್ವಹಿಸಬೇಕು ಎಂದು ನುಡಿದರು.

ಸೈಕಲ್, ಬಿಸಿಯೂಟಗಳಿಂದ ಸುಂದರ ನಾಳೆಗಳನ್ನು ಕಟ್ಟುವುದು ಅಸಾಧ್ಯ. ಅದು ರಾಜಕೀಯ ಅಷ್ಟೇ ಎಂದ ಅವರು, ಕನ್ನಡ ಮಾಧ್ಯಮದ ಪ್ರತಿ ತರಗತಿಗಳಿಗೆ ಒಂದು ಅಧ್ಯಾಪಕರನ್ನು ನಿಯೋಜಿಸುವ ಕಾರ್ಯಕ್ಕೆ ಸರಕಾರ ಮೊದಲ ಆದ್ಯತೆ ನೀಡಬೇಕು. ನಿರಂತರ ಪರಿಶ್ರಮದ ಸಿದ್ಧತೆ ಇದ್ದಾಗ ಮಾತ್ರ ನಾಳೆಯ ಯಶಸ್ವಿ ನಿರ್ಮಾಣ ಸಾಧ್ಯ ಎಂದರು.

ದೇಶದಲ್ಲಿ ಭಾಷೆ, ಸಂಬಂಧಗಳು ಅಧೋಗತಿಗೆ ತಲುಪುತ್ತಿವೆ. ಸಂಬಂಧಗಳೂ ಶಿಕ್ಷಣದಂತೆ ವ್ಯಾಪಾರೀಕರಣವಾಗುತ್ತಿದೆ ಎಂದು ಅಭಿಪ್ರಾಯಿಸಿದ ಅವರು, ಶಿಕ್ಷಣದಿಂದ ಮಾತ್ರ ದೇಶೀಯ ಸಂಸ್ಕೃತಿ ಅರ್ಥೈಸಿಕೊಂಡು ದೇಶ, ಸಂಬಂಧಗಳನ್ನು ಬಲಪಡಿಸಲು ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News