×
Ad

ವೈವಿಧ್ಯತೆ, ಪ್ರಾಮಾಣಿಕತೆ, ಅಜೀವ ಕಲಿಕೆ ಯಶಸ್ಸಿನ ಸೂತ್ರ: ನೋಕಿಯಾ ಸಿಇಓ ರಾಜೀವ್ ಸೂರಿ

Update: 2016-11-19 20:30 IST

ಮಣಿಪಾಲ, ನ.19: ಪ್ರಾಮಾಣಿಕತೆಯೊಂದಿಗೆ ವೈವಿಧ್ಯತೆ, ಜೀವನ ಪರ್ಯಂತ ಕಲಿಯುವ ತುಡಿತ ಜೀವನದಲ್ಲಿ ನಿಮಗೆ ಯಶಸ್ಸನ್ನು ತಂದು ಕೊಡುವುದು ಎಂದು ವಿಶ್ವ ಪ್ರಸಿದ್ಧ ‘ನೋಕಿಯಾ’ ಕಂಪೆನಿಯ ಅಧ್ಯಕ್ಷ ಹಾಗೂ ಸಿಇಓ ರಾಜೀವ್ ಸೂರಿ ಹೇಳಿದ್ದಾರೆ.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಹಳೆ ವಿದ್ಯಾರ್ಥಿಯಾಗಿರುವ ರಾಜೀವ್ ಸೂರಿ, 1989ರಲ್ಲಿ ತಾನು ಇ ಆ್ಯಂಡ್ ಸಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಕಾಲೇಜಿಗೆ 27 ವರ್ಷಗಳ ಬಳಿಕ ಭೇಟಿ ನೀಡಿದ ವೇಳೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.

ಇಂದು ಸಂಜೆ ನಡೆದ ಮಣಿಪಾಲ ವಿವಿಯ 23ನೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ಅವರು ಆಗಮಿಸಿದ್ದರು.

ಎರಡೂವರೆ ದಶಕಗಳ ಬಳಿಕ ತಾನು ನಡೆದಾಡಿದ, ವಿದ್ಯಾರ್ಥಿ ಜೀವನದ ಎಲ್ಲಾ ಅನುಭವಗಳನ್ನು ಪಡೆದ ಮಣಿಪಾಲಕ್ಕೆ ಆಗಮಿಸಿದಾಗ ನಿಜವಾಗಿಯೂ ಹಳೆಯ ನೆನಪುಗಳು ಧುತ್ತನೆ ಕಣ್ಮುಂದೆ ಬರುತ್ತಿವೆ. ನಾನೀಗ ತೀರಾ ಭಾವನಾತ್ಮಕವಾಗಿದ್ದೇನೆ ಎಂದರು.

ಮಣಿಪಾಲದಲ್ಲಿ ನಾನಿದ್ದ ನಾಲ್ಕು ವರ್ಷ ನಿಜವಾಗಿಯೂ ನನ್ನ ಜೀವನದ ಅತೀ ಮಧುರ ಸಮಯವಾಗಿದೆ. ನಾನು ವಿದ್ಯಾರ್ಥಿ ಜೀವನವನ್ನು ಎಲ್ಲಾ ವೈವಿಧ್ಯತೆಗಳೊಂದಿಗೆ ಸವಿದಿದ್ದೇನೆ. ಹೆತ್ತವರು ಇದ್ದ ಕುವೈಟ್‌ನಿಂದ, ಮಣಿಪಾಲಕ್ಕೆ ಇಂಜಿನಿಯರಿಂಗ್ ಕಲಿಯಲು ಆಗಮಿಸಿದಾಗ ನಾನು ನಾಚಿಕೆ ಸ್ವಭಾವದ, ನನ್ನಷ್ಟಕ್ಕೆ ನಾನಿರುವ ವಿದ್ಯಾರ್ಥಿಯಾಗಿದ್ದೆ. ಆದರೆ ಇಂದು ನೋಕಿಯಾದಂಥ ಕಂಪೆನಿಯೊಂದರ ಮುಖ್ಯಸ್ಥನಾಗಿ ಕೆಲಸ ಮಾಡಲು ನಾನು ಇಲ್ಲಿ ಪಡೆದ ಸರ್ವಾಂಗೀಣ ಅನುಭವ ಕಾರಣವಾಗಿದೆ ಎಂದರು.

ಸ್ನೇಹ ನಿಮಗೆ ಜೀವನದಲ್ಲಿ ಮರೆಯಲಾಗದ ಪಾಠಗಳನ್ನು ಕಲಿಸುತ್ತದೆ. ಎಂಐಟಿಯಲ್ಲಿ ನಾನು ಕಲಿಯುವಾಗ ವೈವಿಧ್ಯಮಯ ಸಂಸ್ಕೃತಿಯೊಂದಿಗೆ ಹಾಗೂ ವೈವಿಧ್ಯತೆಯ ವೌಲ್ಯಗಳೊಂದಿಗೆ ಕೂಡಿ ಬೆರೆತಿರುವುದು ನನಗೆ ಜೀವನದಲ್ಲಿ ಇಷ್ಟೊಂದು ಯಶಸ್ಸನ್ನು ತಂದು ಕೊಟ್ಟಿದೆ ಎಂದು ನಾನು ಭಾವಿಸುತ್ತೇನೆ. ಮಲ್ಪೆ ಬೀಚ್, ಹೋಟೆಲ್ ಶಾಂತಲಾ ನನಗೀಗಲೂ ಚೆನ್ನಾಗಿ ನೆನಪಿದೆ. ಸೂರ್ಯಾಸ್ತವನ್ನು ಕಣ್ತುಂಬಿಸಿಕೊಳ್ಳುವ ಎಂಡ್‌ಪಾಯಿಂಟ್ ಮಣಿಪಾಲದಲ್ಲಿ ನನ್ನ ನೆಚ್ಚಿನ ತಾಣವಾಗಿದೆ ಎಂದರು.

ಕಲಿಯುವಿಕೆ ಜೀವನ ಪರ್ಯಂತ ಕ್ರಿಯೆ. ನಾನು ಪ್ರತಿಯೊಂದು ಸಣ್ಣ ವಿಷಯದಲ್ಲೂ, ಪ್ರತಿಯೊಬ್ಬರಿಂದಲೂ ಜೀವನ ಪಾಠವನ್ನು ಕಲಿಯಲು ಉತ್ಸುಕನಾಗಿದ್ದೇನೆ. ಪ್ರತಿಯೊಬ್ಬರು ವೈವಿಧ್ಯತೆಯನ್ನು ಆಲಂಗಿಸಬೇಕು. ವೈವಿಧ್ಯತೆಯೊಂದಿಗೆ ಲಿಂಗ ಸಮಾನತೆ ಇಂದಿನ ಅಗತ್ಯತೆಯಾಗಿದೆ. ವಿಶ್ವದಲ್ಲಿ ಇಂದು ಜಾಗತೀಕರಣ ವಿರುದ್ಧ ಭಾವನೆ ತೀವ್ರವಾಗಿದೆ. ಇದನ್ನು ನಿಭಾಯಿಸುವುದು ಕಠಿಣ ಸವಾಲು. ಮುಂದಿನ 100 ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ದೊಡ್ಡ ಕ್ರಾಂತಿಯೇ ನಡೆಯಲಿದೆ ಎಂದು ರಾಜೀವ್ ಸೂರಿ ನುಡಿದರು.

ನಾಯಕತ್ವ ಎಂಬುದು ಭಾವನಾತ್ಮಕ ಬುದ್ಧಿವಂತಿಕೆ. ನೋಕಿಯಾದ ಮುಖ್ಯಸ್ಥನಾಗಿ ನಾನು ರಿಸ್ಕ್‌ಗಳನ್ನು ತೆಗೆದುಕೊಳ್ಳಲು ಹಾಗೂ ವೈಫಲ್ಯವನ್ನು ಸ್ವೀಕರಿಸಲು ಸದಾ ಸಿದ್ಧನಿದ್ದೇನೆ. ಸೋಲನ್ನು ಸ್ವೀಕರಿಸಲು ನೀವು ಸಿದ್ಧರಿರದಿದ್ದರೆ, ಹೊಸತನ್ನು ಕಂಡು ಹಿಡಿಯಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ನನ್ನದು. ಆದುದರಿಂದ ಸೋಲನ್ನು ಕೂಡಾ ನೀವು ಸಂಭ್ರಮಿಸಬೇಕು. ನನ್ನ ನಾಯಕತ್ವದ ಗುಣಗಳನ್ನೆಲ್ಲಾ ನಾನು ಮಣಿಪಾಲದಲ್ಲೇ ಕಲಿತಿದ್ದೇನೆ. ಇಲ್ಲಿಯೇ ನಾನು ಜನರೊಂದಿಗೆ ಮುಕ್ತವಾಗಿ ಬೆರೆಯಲು, ಸಂವಹಿಸಲು ಕಲಿತಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯ ಬಳಿಕ ಅವರು ಎಂಐಟಿಯ ವಿದ್ಯಾರ್ಥಿ ಸಮುದಾಯ ದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಣಿಪಾಲದ ಸಿಹಿ-ಕಹಿ, ರೋಚಕ ನೆನಪುಗಳನ್ನು, ಬದುಕು ರೂಪಿಸಿದ ಪರಿಯನ್ನು, ನೋಕಿಯಾದ ಮುಖ್ಯಸ್ಥನಾಗಿ ಬೆಳೆದ ದಾರಿಯನ್ನು ನೆನಪಿಸಿಕೊಂಡರು.

ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಉಪಸ್ಥಿತರಿದ್ದರು.

ನೋಕಿಯಾ  ಕೆಮರಾ

ಒಂದು ಕಾಲದಲ್ಲಿ ವಿಶ್ವದಲ್ಲಿ ಮನೆಮಾತಾಗಿದ್ದ ನೋಕಿಯೊ ಮೊಬೈಲ್ ಹ್ಯಾಂಡ್‌ಸೆಟ್‌ನೊಂದಿಗೆ ಸದ್ಯಕ್ಕೆ ಯಾವುದೇ ಉಪಕರಣಗಳನ್ನು ನೋಕಿಯಾ ತಯಾರಿಸುತ್ತಿಲ್ಲ. ನಮ್ಮದೀಗ ಮುಖ್ಯವಾಗಿ ನೆಟ್‌ವರ್ಕ್ ಕಂಪೆನಿಯಾಗಿದೆ. ಆದರೆ ನೋಕಿಯಾ ಟೆಕ್ನಾಲಜಿ ಮೂಲಕ ಶೀಘ್ರದಲ್ಲೇ ಹಲವು ಉಪಕರಣಗಳನ್ನು ನಾವು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ ಎಂದರು.

ನೋಕಿಯಾ ಶೀಘ್ರವೇ ‘ನೋಕಿಯಾ ಓರೆ’ ಎಂಬ ವರ್ಚುವೆಲ್ ರಿಯಾಲಿಟಿ ಕೆಮರಾವನ್ನು ಮಾರುಕಟ್ಟೆಗೆ ತರಲಿದೆ. 360ಡಿಗ್ರಿಯ ಈ ಕೆಮರಾ ಎಂಟು ಲೆನ್ಸ್‌ಗಳನ್ನು ಹೊಂದಿರುತ್ತದೆ. ಅನಂತರ ಸ್ಮಾರ್ಟ್ ಪೋನ್ ಕ್ಷೇತ್ರವನ್ನು ಹೊಸ ಬ್ರಾಂಡಿನೊಂದಿಗೆ ನಾವು ಪ್ರವೇಶಿಸಲಿದ್ದೇವೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News