×
Ad

ಧ್ವನಿವರ್ಧಕಕ್ಕೆ ಅನುಮತಿ ಸರಳೀಕರಣ: ರೈಲ್ವೆ ಸಂಘದ ಮನವಿಗೆ ಸ್ಪಂದಿಸಿದ ಎಸ್ಪಿ

Update: 2016-11-19 20:36 IST

ಉಡುಪಿ, ನ.19: ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಉಪಯೋಗಕ್ಕೆ ಅನುಮತಿ ನೀಡುವ ಕುರಿತು ಇರುವ ವ್ಯವಸ್ಥೆಯನ್ನು ಸರಳೀಕರಿಸಲು ಉಡುಪಿ ರೈಲ್ವೆ ಯಾತ್ರಿ ಸಂಘ ನೀಡಿದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದನ್ನು ಸರಳೀಕರಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ತಿಳಿಸಿದ್ದಾರೆ.

ಈ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಉಪಯೋಗದ ಅನುಮತಿಗೆ ಸಂಬಂಧಿಸಿದಂತೆ ಪೊಲೀಸ್ ಸ್ಟೇಶನ್‌ಗೆ ಅರ್ಜಿ ಸಲ್ಲಿಸಿ ಅವರ ಹಸ್ತಾಕ್ಷರದ ಅರ್ಜಿಯನ್ನು ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಗೆ ನೀಡಿ ನಿಗದಿತ ಶುಲ್ಕ ಕಟ್ಟಿ, ಅದರ ರಶೀದಿಯನ್ನು ಪೊಲೀಸ್ ಸ್ಟೇಶನ್‌ಗೆ ಕೊಟ್ಟು ಅವರು ಬರೆದ ಷರಾದೊಂದಿಗೆ ಇನ್‌ಸ್ಪೆಕ್ಟರ್ ಕಚೇರಿಗೆ ಹೋಗಿ ಅಲ್ಲಿಂದ ಅನುಮತಿ ಪಡೆಯಬೇಕಿತ್ತು.

ಈ ಗೊಂದಲವನ್ನು ಕಡಿಮೆ ಮಾಡಿ ವ್ಯವಸ್ಥೆಯನ್ನು ಸರಳೀಕರಿಸಲು ಉಡುಪಿ ರೈಲ್ವೆ ಯಾತ್ರಿ ಸಂಘ, ಎಸ್ಪಿಗೆ ಮನವಿ ಮಾಡಿತ್ತು. ಅದರಂತೆ ಅನುಮತಿ ಬೇಕಾದವರು ಸಂಬಂಧಿಸಿದ ಪೊಲೀಸ್ ಸ್ಟೇಷನ್‌ಗೆ ಹೋಗಿ ಅರ್ಜಿ ಸಲ್ಲಿಸಿ, ಅಲ್ಲಿಯೇ ಶುಲ್ಕ ಪಾವತಿಸಿ, ಅದೇ ಸ್ಟೇಶನ್‌ನ ಇನ್‌ಸ್ಪೆಕ್ಟರ್ ಇದ್ದರೆ ಅಲ್ಲಿ ಅಥವಾ ಸಂಬಂಧಿತ ಸರ್ಕಲ್ ಕಚೇರಿಗೆ ಹೋಗಿ ಅಲ್ಲಿ ಅವರಿಂದ ಅನುಮತಿ ಪಡೆದರೆ ಸಾಕಾಗುತ್ತದೆ. ಉಡುಪಿ ರೈಲ್ವೆ ಯಾತ್ರಿ ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಅವರಿಗೆ ಸಂಘದ ಪರವಾಗಿ ಕೃತಜ್ಞತೆಯನ್ನು ಡಯಾಸ್ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News