ಮಸ್ಕತ್‌ನ ಎಸ್‌ಕೆಎಂಡಬ್ಲ್ಯುಎ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Update: 2016-11-19 15:28 GMT

ಮಂಗಳೂರು, ನ. 19: ಮಸ್ಕತ್‌ನ ಸೌತ್ ಕೆನರಾ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ (ಎಸ್‌ಕೆಎಂಡಬ್ಲ್ಯುಎ) ಅಧೀನದ ಸಂಸ್ಥೆ ‘ಸೇವಾ’ ವತಿಯಿಂದ ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಕೆಎಂಡಬ್ಲ್ಯುಎ ಮುಖ್ಯ ಸಲಹೆಗಾರ ಹಾಗೂ ‘ಸೇವಾ’ದ ಸ್ಥಾಪಕಾಧ್ಯಕ್ಷ ಎ.ಕೆ.ಮೊಹಿಯುದ್ದೀನ್, ಈ ಬಾರಿ ಪ್ರತಿ ವಿದ್ಯಾರ್ಥಿಗಳಿಗೆ 12,000 ರೂ.ನಂತೆ 35 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದೆ. ವಿದ್ಯಾರ್ಥಿ ವೇತನಕ್ಕಾಗಿ ಸುಮಾರು 300 ಅರ್ಜಿಗಳು ಬಂದಿದ್ದವು ಎಂದರು.

ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್.ಮಾತನಾಡಿ, ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರು ಸ್ಪರ್ಧಾತ್ಮಕ ವಿಷಯಗಳ ಕಡೆಗೆ ಗಮನ ಹರಿಸಬೇಕು. ತಮ್ಮ ಗುರಿ ತಲುಪುವವರೆಗೆ ಪರಿಶ್ರಮವನ್ನು ಮುಂದುವರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಿ.ಸಿ. ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಹಾಶಿರ್ ಮಾತನಾಡಿ, ಸಮಾಜವು ಇಂದು ನಿಮ್ಮ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸಿದಂತೆ ಭವಿಷ್ಯದಲ್ಲಿ ನೀವೂ ಕೂಡ ಇತರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಯನಿವೆಫ್ ಕಾರ್ಯದರ್ಶಿ ಯು.ಕೆ.ಖಾಲಿದ್, ಆಯಿಶಾ ಸ್ಕೂಲ್ ಉಪ್ಪಿನಂಗಡಿಯ ಅಧ್ಯಕ್ಷ ಅಮೀನ್ ಅಹ್ಸನ್, ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷ ಅಡ್ವೊಕೇಟ್ ಸಾದುದ್ದೀನ್ ಸ್ವಾಲಿಹಿ, ಜಮೀಯತುಲ್ ಫಲಾಹ್‌ನ ಝುಬೇರ್ ಶಾ, ಎಸ್‌ಕೆಎಂಡಬ್ಲುಎ ಇದರ ಸ್ಥಾಪಕ ಸದಸ್ಯ ಹಾರೂನ್ ರಶೀದ್ ಉಪಸ್ಥಿತರಿದ್ದರು.

ಮುಹಮ್ಮದ್ ಸದೀದ್ ಕುರ್‌ಆನ್ ವಾಚಿಸಿದರು. ಅಮ್ಮಾರ್ ಅಹ್ಸನ್ ಅನುವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News