ವೀಣೆ ಶೇಷಣ್ಣ, ವಿ.ಎನ್.ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Update: 2016-11-19 16:09 GMT

ಉಡುಪಿ, ನ.19: ನಾಡಿನ ಖ್ಯಾತನಾಮ ವೀಣಾ ವಾದಕ ಡಿ.ಬಾಲಕೃಷ್ಣ ಹಾಗೂ ಶಾಸ್ತ್ರೀಯ ಹಾಡುಗಾರ್ತಿ ಬಾಂಬೆ ಜಯಶ್ರೀ ರಾಮನಾಥ್ ಅವರಿಗೆ ಇಂದು ರಾಜಾಂಗಣದಲ್ಲಿ ನಡೆದಿರುವ ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ ‘ವೀಣೆಯ ಬೆಡಗು’ ಕಾರ್ಯಕ್ರಮದಲ್ಲಿ ಕ್ರಮವಾಗಿ ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸ್ವರಮೂರ್ತಿ ವಿ.ಎನ್.ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಪರ್ಯಾಯ ಶ್ರೀ ಪೇಜಾವರ ಮಠ ಮತ್ತು ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಾಜಾಂಗಣದಲ್ಲಿ ನಡೆದಿರುವ ‘ವೀಣೆಯ ಬೆಡಗು’ ವೀಣೆ ಶೇಷಣ್ಣ ಸಂಗೀತೋತ್ಸವದ ಎರಡನೇ ದಿನದಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಡಿ.ಬಾಲಕೃಷ್ಣ ಹಾಗೂ ಬಾಂಬೆ ಜಯಶ್ರೀಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀವಿಶ್ವೇಶತೀರ್ಥರು, ವೀಣೆ ಮತ್ತು ಕೊಳಲು (ವೇಣು) ನಮ್ಮ ಪ್ರಾಚೀನ ವಾದ್ಯಗಳಾಗಿದೆ. ಸಂಸ್ಕೃತಿಯ ಉಳಿವಿಗೆ ಋಷಿಮುನಿಗಳು, ಶಾಸ್ತ್ರ, ಪುರಾಣಗಳು ಹೇಗೆ ಕಾರಣವಾದವೊ ಹಾಗೆಯೇ ಇಂದು ಲಲಿತಕಲೆ, ಸಂಗೀತ, ನೃತ್ಯ, ಶಿಲ್ಪ ಇನ್ನಿತರ ಕಲೆಗಳು ಸಂಸ್ಕೃತಿ ಉಳಿವಿನಲ್ಲಿ ಪೋಷಕ ಪಾತ್ರ ವಹಿಸಿವೆ ಎಂದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಆಧುನಿಕ ವಿದೇಶಿ ಸಂಗೀತಗಳ ಧಾವಂತದಲ್ಲಿ ಎಲ್ಲಿ ನಮ್ಮ ಶಾಸ್ತ್ರೀಯ ಸಂಗೀತಗಳು ಮರೆಯಾಗಿ ಬಿಡುತ್ತದೋ ಎಂಬ ಆತಂಕ ಕೆಲ ವರ್ಷಗಳ ಹಿಂದಿತ್ತು. ಆದರೆ ಇಂದು ಶಾಸ್ತ್ರೀಯ ಸಂಗೀತ ಮತ್ತೆ ಚಿಗುರೊಡೆದು ಹೆಮ್ಮರವಾಗಿದೆ. ಬಾಲಪ್ರತಿಭೆಗಳು ಹೆಚ್ಚುತ್ತಿರುವುದೇ ಇದರ ಸಂಕೇತ. ಯಾವುದೇ ಕಾರ್ಯಗಳಲ್ಲೂ ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೋತ್ಸಾಹಿಸಿ ಪ್ರೇರೇಪಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಸ್ವರಮೂರ್ತಿ ವಿ.ಎನ್. ರಾವ್ ಟ್ರಸ್ಟ್ ವತಿಯಿಂದ ಕಲಾವಿದರಿಗೆ ನೀಡುವ ಪ್ರಶಸ್ತಿಯ ಮೊತ್ತ 50 ಸಾವಿರ ರೂ. ಇದ್ದುದನ್ನು ಸಂಘಟಕರ ಮನವಿಯಂತೆ ಈ ವರ್ಷದಿಂದಲೇ ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ಡಾ. ವೀರೇಂದ್ರ ಹೆಗ್ಗಡೆ ಘೋಷಿಸಿದರು.

ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ನ್ಯಾಶನಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಎ.ಎಚ್. ರಾಮರಾವ್, ವಿದ್ವಾನ್ ಆರ್.ಎನ್.ತ್ಯಾಗರಾಜನ್, ಎನ್.ಆರ್.ಅನಂತನಾರಾಯಣ ಉಪಸ್ಥಿತರಿದ್ದರು.

ಟ್ರಸ್ಟ್ ಅಧ್ಯಕ್ಷ ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ ಸ್ವಾಗತಿಸಿದರು. ಕಲಾವಿದೆ ಉಮಾಶಂಕರಿ ಕಾರ್ಯಕ್ರಮ ನಿರೂಪಿಸಿ ಪ್ರೊ.ಎಂ.ಎಲ್.ಸಾಮಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News