ಕುತ್ತಾರು:ಮನೆಗೆ ನುಗ್ಗಿ ಗುಂಪಿನಿಂದ ದಾಂಧಲೆ, ಇಬ್ಬರ ಬಂಧನ

Update: 2016-11-19 18:03 GMT

ಮಂಗಳೂರು, ನ. 19: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ನಾಪತ್ತೆಯಾದ ಪ್ರಕರಣ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರಿನಲ್ಲಿ ಅಶಾಂತಿಗೆ ಕಾರಣವಾದ ಘಟನೆ ಶನಿವಾರ ಸಂಜೆ ನಡೆದಿದೆ. ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಆಕೆಯನ್ನು ಅಪಹರಿಸಿ ಕುತ್ತಾರಿನ ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಿದ್ದಾನೆ ಎಂಬ ಶಂಕೆಯಿಂದ ಯುವತಿಯ ಕಡೆಯ ಗುಂಪೊಂದು ಕುತ್ತಾರಿನ ಮನೆಗೆ ಅಕ್ರಮ ಪ್ರವೇಶಗೈದು ದಾಂಧಲೆ ಮಾಡಿದ್ದು ಸಕಾಲಕ್ಕೆ ಬಂದ ಉಳ್ಳಾಲ ಪೊಲೀಸರು ಇಬ್ಬರು ಬಂಧಿಸಿದ್ದಾರೆ.

ಪೊಲೀಸರಿಗೆ ದೂರು

ಸುನೈನಾ ಇಂದು ಮಧ್ಯಾಹ್ನ ಸಿಟಿ ಕಾರ್ಪೊರೇಶನ್‌ಗೆ ಹೂಗುವುದಾಗಿ ಮನೆಮಂದಿಗೆ ತಿಳಿಸಿ ಮನೆಯಿಂದ ಹೊರಬಂದಿದ್ದಾಳೆ. ಆಕೆಯ ನಡತೆಯ ಬಗ್ಗೆ ಅನುಮಾನಗೊಂಡ ಸಹೋದರಿ ಮಮ್ತಾಝ್ ಎಂಬವರು ಆಕೆಯನ್ನು ಹಿಂಬಾಲಿಸಿ ಬಂದಿದ್ದು, ಆಕೆ ಕುದ್ರೋಳಿ ರಸ್ತೆಯಲ್ಲಿ ಅಂಗಡಿಯೊಂದಲ್ಲಿ ಕುಳಿತುಕೊಂಡಿದ್ದಳು. ಈ ಸಂದರ್ಭದಲ್ಲಿ ಅಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಯೋವಕನೋರ್ವನೊಂದಿಗೆ ಆಕೆ ತೆರಳಿರುವುದಾಗಿ ಬರ್ಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಯುವತಿಯ ಕಡೆಯವರು ಆಕೆಯನ್ನು ಹಿಂಬಾಲಿಸುತ್ತಾ ಸಂಜೆ 7 ಗಂಟೆ ಹೊತ್ತಿಗೆ ಕುತ್ತಾರು ಪೆಟ್ರೋಲ್ ಪಂಪಿನ ಎದುರು ರಸ್ತೆಯಲ್ಲಿರುವ ಕಾಮತ್ ಕಂಪೌಂಡಿನ ಲೋಬೊ ಮನೆಗೆ ಪ್ರವೇಶಗೈದು ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತಂಡ ಮನೆ ಪ್ರವೇಶಿಸಿದ್ದನ್ನು ಅರಿತ ಲೋಬೊ ಅವರು ತಕ್ಷಣ ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸುವುದನ್ನು ಕಂಡ ಆರೋಪಿಗಳು ತಾವು ಬಂದ ಕಾರಿನಲ್ಲಿ ಪಲಾಯನಗೈಯಲು ಯತ್ನಿಸಿದರಾದರೂ ಮಂಜೇಶ್ವರದ ಶಿಯಾಬ್ ಹಾಗೂ ಮಂಜನಾಡಿಯ ಮಜೀದ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸ್ಥಳಕ್ಕೆ ಎಸಿಪಿ ಶೃತಿ, ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಕ್ರೈಂ ಎಸ್‌ಐ ರಾಜೇಂದ್ರ, ಸಿಸಿಬಿ ಸಬ್‌ಇನ್ಸ್‌ಪೆಕ್ಟರ್ ಶಾಮ್‌ಸುಂದರ್ ಆಗಮಿಸಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News