×
Ad

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಚಿತ್ರಕಲೆ ಸಹಕಾರಿ: ಪಿ.ಮುಹಮ್ಮದ್

Update: 2016-11-20 10:02 IST

ಪಡುಬಿದ್ರೆ, ನ.20: ಚಿತ್ರಕಲೆಯಂಥಹ ಚಟುವಟಿಕೆಗಳಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂದು ಖ್ಯಾತ ವ್ಯಂಗ್ಯಚಿತ್ರಕಾರ ಪಿ.ಮುಹಮ್ಮದ್ ಹೇಳಿದರು.

ಪಡುಬಿದ್ರೆ ಬೀಚ್‌ನಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪಡುಬಿದ್ರೆ ರೋಟರಿ ಕ್ಲಬ್ ಮತ್ತು ಸಾಯಿರಾಧಾ ಹೆರಿಟೇಜ್‌ನ ಜಂಟಿ ಸಹಯೋಗದೊಂದಿಗೆ ಶನಿವಾರ ನಡೆದ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ‘ವರ್ಣ ವಿಹಾರ-2016’ನ್ನು ಕಡಲತಡಿಯ ದೃಶ್ಯದ ಚಿತ್ರಬಿಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಬಣ್ಣ ಮತ್ತು ಬಿಳಿ ಹಾಳೆಯನ್ನು ಒದಗಿಸಿದರೆ ಕಾಲಕ್ರಮೇಣ ಅದು ಹವ್ಯಾಸವಾಗಿ ಬೆಳೆಯುತ್ತದೆ. ಮಕ್ಕಳ ಮನಸ್ಸಿನಲ್ಲಿರುವ ಅನಿಸಿಕೆ, ಅಭಿವ್ಯಕ್ತಿಗೆ ಅವಕಾಶ ಸಿಗುತ್ತದೆ ಎಂದವರು ನುಡಿದರು.

ರೋಟರಿ ಕ್ಲಬ್ ವಲಯ 5ರ ಸಹಾಯಕ ಗವರ್ನರ್ ಡಾ.ಗುರುರಾಜ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಬೇಕಾದರೆ ಸ್ಪರ್ಧಾತ್ಮಕ ವಾತಾವರಣದಲ್ಲಿ ಭಾಗವಹಿಸುವಿಕೆ ಅಗತ್ಯವಾಗಿದೆ. ಪೋಷಕರು ಮಕ್ಕಳ ಸೃಜನಶೀಲತೆಗೆ ಒತ್ತು ನೀಡಬೇಕು ಎಂದರು. ಸಾಯಿರಾಧಾ ಹೆರಿಟೇಜ್‌ನ ವಿಠಲ್, ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ಮಾಧವ ಸುವರ್ಣ ಮಾತನಾಡಿದರು.
ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಒಟ್ಟು 206 ವಿದ್ಯಾರ್ಥಿಗಳು ಭಾಗವಹಿಸಿದರು. ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ಅಬ್ದುಲ್ ಹಮೀದ್ ಸ್ವಾಗತಿಸಿದರು. ವಿಶ್ವಾಸ್ ವಿ. ಅಮೀನ್, ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರೆ ವಂದಿಸಿದರು. ಸುಧಾಕರ್ ಪಡುಬಿದ್ರೆ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News