ವಿಧಾನ ಮಂಡಲ ಅಧಿವೇಶನಕ್ಕೆ ಬೆಳಗಾವಿ ಸಜ್ಜು

Update: 2016-11-20 14:06 GMT

ಬೆಳಗಾವಿ, ನ. 20: ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ‘ಸಾಲಮನ್ನಾ’ ಹೊರೆ ಇಳಿಸುವ ನಿರೀಕ್ಷೆಯಲ್ಲಿ ನ.21ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ, ಆಡಳಿತ ಮತ್ತು ವಿಪಕ್ಷಗಳ ಗುದ್ದಾಟಕ್ಕೆ ಸಾಕ್ಷಿಯಾಗಲು ಸಜ್ಜುಗೊಳ್ಳುತ್ತಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧ ಸೇರಿದಂತೆ ಇಡೀ ಬೆಳಗಾವಿ ಅಕ್ಷರಶಃ ನವ ವಧುವಿನಂತೆ ಸಿಂಗಾರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು, ಮೇಲ್ಮನೆ ಸದಸ್ಯರ ಸ್ವಾಗತಕ್ಕೆ ಸರ್ವ ಸನ್ನದ್ಧವಾಗಿದ್ದು, ಅಧಿವೇಶನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸತತ ಮೂರು ವರ್ಷಗಳಿಂದ ಬರದ ದವಡೆಗೆ ಸಿಲುಕಿರುವ ರೈತರು, ಮುಂಗಾರು ಮತ್ತು ಹಿಂಗಾರು ಎರಡೂ ಬೆಳೆ ವೈಫಲ್ಯದಿಂದ ಕಂಗೆಟ್ಟಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗದ ಸಮಸ್ಯೆಯೂ ಸೃಷ್ಟಿಯಾಗಿದ್ದು, ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಬರ ಪರಿಸ್ಥಿತಿ ಅಧಿವೇಶನದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಸ್ಥಿತಿ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ.

ಇದೇ ವೇಳೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿ ವಿಪಕ್ಷಗಳ ಸದಸ್ಯರು ರಾಜ್ಯ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಒತ್ತಾಯದ ಕೂಗಿದೆ.

ಆದುದರಿಂದ ರಾಜ್ಯ ಸರಕಾರ ರೈತರಿಗೆ ಆರ್ಥಿಕ ಚೈತನ್ಯ ನೀಡುವ ದೃಷ್ಟಿಯಿಂದ ಒಂದು ಅವಧಿಗೆ ಬೆಳೆ ಸಾಲ ಮನ್ನಾ ಘೋಷಣೆ ಮಾಡುವುದು ಅನಿವಾರ್ಯ. ಹೀಗಾಗಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶದತ್ತ ರಾಜ್ಯದ ದೃಷ್ಟಿ ನೆಟ್ಟಿದ್ದು, ರಾಜ್ಯ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ನ.21ರಂದು ಸುವರ್ಣವಿಧಾನಸೌಧದಲ್ಲಿ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಸಂತಾಪ ಸೂಚನೆ ನಿರ್ಣಯ ಮಂಡನೆಯೊಂದಿಗೆ ಆರಂಭಗೊಳ್ಳಲಿದೆ. ಆ ದಿನ ಬೇರೆ ಕಾರ್ಯ ಕಲಾಪ ನಡೆಯುವುದು ಕಡಿಮೆ. ನ.22ರಿಂದ ನ.25ರ ವರೆಗೆ ಪ್ರಶ್ನೋತ್ತರ ಕಲಾಪ ಸೇರಿದಂತೆ ವಿವಿಧ ಕಾರ್ಯ ಕಲಾಪಗಳು ಜರುಗಲಿವೆ.

ನ.26ರ ಶನಿವಾರ ಮತ್ತು 27ರ ರವಿವಾರ ಅಧಿವೇಶನಕ್ಕೆ ರಜೆ. ನ.28ರಿಂದ ಡಿ.2ರ ವರೆಗೆ ಅಧಿವೇಶನ ಕಲಾಪ ನಡೆಯಲಿದ್ದು, ರಾಜ್ಯ ಸರಕಾರವನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿಸಲು ಅಧಿಕೃತ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಜ್ಜುಗೊಂಡಿದ್ದಾರೆ.

ನೋಟು ಅಮಾನ್ಯ ಚರ್ಚೆ: ಕೇಂದ್ರ ಸರಕಾರ 500 ಮತ್ತು 1 ಸಾವಿರ ರೂ.ಮುಖಬೆಲೆಯ ನೋಟು ರದ್ದು ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭದಲ್ಲಿ ಮೊಬೈಲ್ ವೀಕ್ಷಣೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿನ ಪ್ರಸಕ್ತ ವಿಚಾರಗಳ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಈ ಮಧ್ಯೆ ಕಬ್ಬಿಗೆ ಬೆಲೆ ನಿಗದಿ, ಬಾಕಿ ಕೊಡಿಸುವುದು, ಬೆಳೆ ಸಾಲಮನ್ನಾ ಸೇರಿ ವಿವಿಧ ವಿಷಯಗಳನ್ನು ರೈತರು, ಭೂಮಿ ಮತ್ತು ವಸತಿಗಾಗಿ ಆಗ್ರಹಿಸಿ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿಯೇ ಧರಣಿ ಸತ್ಯಾಗ್ರಹಗಳು ಹಮ್ಮಿಕೊಂಡಿವೆ.

 ಕನ್ನಡ ರಾಜ್ಯೋತ್ಸವದ ದಿನವೇ ಬೆಳಗಾವಿಯಲ್ಲಿ ಅಲ್ಲಿನ ಮೇಯರ್ ಮತ್ತು ಉಪ ಮೇಯರ್ ಎಂಇಎಸ್ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಉದ್ಧಟತನ ಮೆರೆದಿರುವ ಬಗ್ಗೆಯೂ ಚರ್ಚೆ ನಡೆಯಲಿದ್ದು, ಕ್ರಮ ಕೈಗೊಳ್ಳುವ ಸಂಬಂಧ ರಾಜ್ಯ ಸರಕಾರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.

ರೈತರು ಹಾಗೂ ಜನ ಸಾಮಾನ್ಯರ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರಕ್ಕೆ ಅತ್ಯುನ್ನತ ವೇದಿಕೆಯಾಗಿರುವ ಅಧಿವೇಶನ ಕಲಾಪ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ಯುದ್ಧ, ಗದ್ದಲ ಮತ್ತು ಕೋಲಾಹಲದಲ್ಲೆ ಪೂರ್ಣಗೊಳ್ಳದೆ, ಸಾಲಮನ್ನಾ ಸೇರಿದಂತೆ ‘ಅರ್ಥಪೂರ್ಣ ಪರಿಹಾರ’ಗಳೊಂದಿಗೆ ಅಂತ್ಯಗೊಳ್ಳುವುದೇ ಕಾದುನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News