×
Ad

ಸರಕಾರ ಚಾಪೆಯ ಕೆಳಗೆ ನುಸುಳಿದರೆ ರಂಗೋಲಿಯಡಿಗೆ ನುಸುಳಿದ ಭ್ರಷ್ಟರು !

Update: 2016-11-20 19:53 IST

ಹೊಸದಿಲ್ಲಿ, ನ.20: ವ್ಯಾಪಕವಾಗಿರುವ ಭ್ರಷ್ಟಾಚಾರ ಹಾಗೂ ತೆರಿಗೆಗಳ್ಳತನಗಳನ್ನು ತಡೆಯಲು ದೊಡ್ಡ ವೌಲ್ಯದ ನೋಟುಗಳನ್ನು ಸರಕಾರ ರದ್ದುಗೊಳಿಸಿದೆ. ಆದರೆ, ಸರಕಾರದ ಈ ಹಠಾತ್ ಕ್ರಮಕ್ಕೆ ಸಡ್ಡು ಹೊಡೆಯಲು ಭಾರತೀಯರು ರೋಲೆಕ್ಸ್ ವಾಚ್ ಖರೀದಿಗೆ ‘ನಗದು ಕೂಲಿಗಳಿಂದ’ ತೊಡಗಿ ಹಲವು ವಿಶಿಷ್ಟ ದಾರಿಗಳನ್ನು ಕಂಡುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನ.8ರಂದು ರೂ.500 ಹಾಗೂ 1000ದ ನೋಟುಗಳ ರದ್ದತಿಯನ್ನು ಘೋಷಿಸುವ ಮೂಲಕ ದೇಶಾದ್ಯಂತ ಆಘಾತದ ಅಲೆಗಳನ್ನು ಕಳುಹಿಸಿದ್ದರು. ಅದಾಗಿ ತಾಸಿನೊಳಗೆಒ ಚಲಾವಣೆಯಲ್ಲಿರುವ ನೋಟುಗಳ ಶೇ.85ರಷ್ಟು ನೋಟುಗಳು ರದ್ದಿ ಕಾಗದಗಳಾದುವು.

ಈ ಘೋಷಣೆಯು ಭಾರತದ ನಗದು ಆಧರಿತ ಆರ್ಥಿಕತೆಯಲ್ಲಿ ತಲ್ಲಣ ಸೃಷ್ಟಿಸಿತು. ಅಘೋಷಿತ ಹಾಗೂ ಲೆಕ್ಕ ನೀಡದ ಸಂಪತ್ತನ್ನು ಶೇಖರಿಸಿಟ್ಟ ತಮ್ಮ ‘ಕಪ್ಪು ಹಣವನ್ನು ವಿನಿಮಯಗೊಳಿಸಲು ಅಥವಾ ಚಿನ್ನ ಹಾಗೂ ಐಶಾರಾಮಿ ವಸ್ತುಗಳ ಖರೀದಿಗೆ ಉಪಯೋಗಿಸಲು ಹುಚ್ಚು ಧಾವಂತ ನಡೆಸಿದರು.

ದೇಶದಲ್ಲಿ ಅಂದಾಜು 2,100 ಮಂದಿ ರೂ.340 ಕೋಟಿಗೂ ಹೆಚ್ಚು ಸಂಪತ್ತುಳ್ಳ ಕುಬೇರರಿದ್ದರೂ, 2012-13ರಲ್ಲಿ ರೂ.50 ಕೋಟಿಗಿಂತ ಹೆಚ್ಚು ಸಂಪಾದಿಸುವ ಕೇವಲ 6 ಮಂದಿಯಷ್ಟೇ ರಿಟರ್ನ್ಸ್ ದಾಖಲಿಸಿದ್ದಾರೆಂದು ನಂಬಲಾಗಿದೆ.

ರೂ.2.5 ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿಯಿರಿಸುವವರ ವಿವರವನ್ನು ಬ್ಯಾಂಕ್‌ಗಳು ವರದಿ ಮಾಡಲೇ ಬೇಕು ಹಾಗೂ ಅಘೋಷಿತ ಆಸ್ತಿಯಿರುವುದು ಪಾವತಿಸಬೇಕಾದ ತೆರಿಗೆಯ ದುಪ್ಪಟ್ಟು ದಂಡ ಪಾವತಿಗೆ ಕಾರಣವಾಗಬಹುದೆಂದು ಸರಕಾರ ಎಚ್ಚರಿಸುತ್ತಲೇ ಬಂದಿದೆ.

ನಗದು ಕೂಲಿಗಳು

ಕೆಲವು ಕೈಗಾರಿಕೆಗಳ ಮಾಲಕರು ಹಾಗೂ ವ್ಯಾಪಾರಿಗಳು, ಡಿ.30ರ ಅಂತಿಮ ಗಡುವಿನೊಳಗೆ ತಮ್ಮಲ್ಲಿರುವ ಹಳೆಯ ನೋಟುಗಳ ಬದಲಾವಣೆಗಾಗಿ ಬ್ಯಾಂಕ್‌ಗಳಲ್ಲಿ ಸರತಿಯ ಸಾಲಿನಲ್ಲಿ ನಿಲ್ಲಲು ಸಿಬಂದಿಯನ್ನು ವಿನಂತಿಸಿದ ಅಥವಾ ಸಂಬಳಕ್ಕೆ ಆಳುಗಳನ್ನು ನೇಮಿಸಿದ ಹಲವು ಪ್ರಕರಣಗಳು ವರದಿಯಾಗಿವೆ.

ಮೊದಲು ಬ್ಯಾಂಕ್ ಕೌಂಟರ್‌ಗಳಲ್ಲಿ ಹಳೆ ನೋಟು ವಿನಿಮಯದ ಮಿತಿ ರೂ. 4,000 ಇದ್ದುದನ್ನು, ಅಪ್ರಾಮಾಣಿಕರು ನೋಟು ಬದಲಾಯಿಸಲು ಬಡವರನ್ನು ಸಂಬಳಕ್ಕೆ ನೇಮಿಸುತ್ತಿರುವುದು ಸರಕಾರದ ಗಮನಕ್ಕೆ ಬಂದ ಬಳಿಕ ರೂ.2,000ಕ್ಕೆ ಇಳಿಸಲಾಗಿದೆ.

ಒಬ್ಬನೇ ವ್ಯಕ್ತಿ ಹಲವು ಬಾರಿ ನೋಟು ವಿನಿಮಯ ಮಾಡುವುದನ್ನು ತಪ್ಪಿಸಲು ಚುನಾವಣೆಗಳಲ್ಲಿರುವಂತೆ ಬೆರಳಿಗೆ ಶಾಯಿ ಹಚ್ಚುವಂತೆ ಬ್ಯಾಂಕ್‌ಗಳಿಗೆ ಸರಕಾರ ಸೂಚಿಸಿತು.

ರೋಲೆಕ್ಸ್ ಖರೀದಿಗೆ ಓಟ

ನೋಟು ರದ್ದತಿ ಘೋಷಣೆಯ ಬಳಿಕ ಶ್ರೀಮಂತರು ತಮ್ಮ ಲೆಕ್ಕ ನೀಡದ ಹಣದಿಂದ ದುಬಾರಿ ವಸ್ತುಗಳನ್ನು ಖರೀದಿಸಲು ಧಾವಿಸಿದರು. ರೋಲೆಕ್ಸ್ ಹಾಗೂ ಡಿಯೋರ್‌ಗಳಂತಹ ಹಲವು ಐಶಾರಾಮಿ ಬ್ರಾಂಡ್‌ಗಳ ಮಾರಾಟಗಾರರು ನ.8ರ ಮಧ್ಯರಾತ್ರಿಯ ತನಕ ಅಂಗಡಿಗಳನ್ನು ತೆರೆದಿರಿಸುತ್ತೇವೆಂದು ಗಿರಾಕಿಗಳಿಗೆ ಇ-ಮೇಲ್ ಕಳುಹಿಸಿದ್ದರೆಂದು ಇಕಾನಮಿಕ್ ಟೈಂಸ್ ವರದಿ ಮಾಡಿದೆ.

ದಿಲ್ಲಿಯ ಜಾಗತಿಕ ಮಟ್ಟದ ಬ್ರಾಂಡೆಡ್ ಫ್ಯಾಶನ್ ಉಡುಪುಗಳ ಮಾರಾಟದ ಪ್ರಸಿದ್ಧ ಅಂಗಡಿಯೊಂದು ಅಂದು ಇಡೀ ರಾತ್ರಿ ತೆರೆದಿದ್ದು, 3 ತಾಸಿಗೂ ಕಡಿಮೆ ಅವಧಿಯಲ್ಲಿ ರೂ. 1 ಕೋಟಿಗೂ ಹೆಚ್ಚು ವ್ಯಾಪಾರ ನಡೆಸಿದೆಯೆಂದು ಅದು ಹೇಳಿದೆ.

ಚಿನ್ನ ಖರೀದಿ

ಕೆಲವು ಶ್ರೀಮಂತ ಗ್ರಾಹಕರು ಮಾರುಕಟ್ಟೆ ದರದ ದುಪ್ಪಟ್ಟು ಕ್ರಯಕ್ಕೆ ಹಳೆ ನೋಟುಗಳನ್ನು ನೀಡಿ ಚಿನ್ನ ಖರೀದಿಸಿದ್ದಾರೆ. ನ.8ರಂದು ವ್ಯಾಪಾರ ಮುಗಿಸಿ ಮನೆಗಳಿಗೆ ಹೋಗಿದ್ದ ಚಿನ್ನಾಭರಣ ವ್ಯಾಪಾರಿಗಳು, ತಾಸಿನೊಳಗೆ ಮರಳಿ ಅಂಗಡಿ ತೆರೆದು ಇಡೀ ರಾತ್ರಿ ಚಿನ್ನ ಮಾರಿದರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ದಿಲ್ಲಿ ಹಾಗೂ ಮುಂಬೈಗಳಲ್ಲಿ ಗ್ರಾಹಕರು ಹಳೆ ನೋಟುಗಳ ಚೀಲಗಳೊಂದಿಗೆ ಚಿನ್ನದಂಗಡಿಗಳಲ್ಲಿ ಸರತಿಯ ಸಾಲಿನಲ್ಲಿ ನಿಂತರು. ಅವರು 10 ಗ್ರಾಂ ಚಿನ್ನಕ್ಕೆ ಸುಮಾರು ರೂ.52 ಸಾವಿರ(762 ಡಾಲರ್) ಪಾವತಿಸಿದರೆಂದು ವರದಿಯೊಂದು ತಿಳಿಸಿದೆ.

ಬ್ಯಾಂಕ್ ಖಾತೆ ಬಾಡಿಗೆಗೆ

ಬಡವರನ್ನು ಹಾಗೂ ರೈತರನ್ನು ಆರ್ಥಿಕತೆಯೊಳಗೆ ತರುವ ಕ್ರಮವಾಗಿ ಸರಕಾರ ಹೊಸ ‘ಜನಧನ’ ಖಾತೆಗಳನ್ನು ತೆರೆಸಿತ್ತು. ಕಲ್ಯಾಣ ಕಾರ್ಯಕ್ರಮಗಳ ಹಣ ಹಾಗೂ ಸಬ್ಸಿಡಿ ಇತ್ಯಾದಿಗಳು ನೇರವಾಗಿ ಇಂತಹ ಖಾತೆಗಳಿಗೆ ಜಮಾ ಆಗುವಂತೆ ಅವುಗಳನ್ನು ರೂಪಿಸಲಾಗಿದೆ. ಅಂತಹ ‘ಜನಧನ’ ಖಾತೆಗಳ ಎಲ್ಲ ನಗದು ಠೇವಣಿಗಳ ಮೇಲೆ ಕಣ್ಣಿಟ್ಟಿದ್ದೇವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ನೋಟು ರದ್ದತಿ ಘೋಷಣೆಯ ಬಳಿಕ, ಇಂತಹ ಹಲವು ಖಾತೆಗಳಿಗೆ ಒಂದೇ ದಿನದಲ್ಲಿ ಸಾವಿರಗಟ್ಟಲೆ ರೂ. ಜಮಾ ಆಗಿದೆ. ಭ್ರಷ್ಟರು ಮತ್ತೆ ಹಿಂಪಡೆಯುವ ಸಲುವಾಗಿಯೇ ಹಣ ಠೇವಣಿಯಿರಿಸಲು ಈ ಖಾತೆಗಳನ್ನು ‘ಬಾಡಿಗೆಗೆ’ ಪಡೆಯುತ್ತಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಯಾಣದ ಟಿಕೆಟ್

ರೈಲ್ವೆ ಟಿಕೆಟ್ ಖರೀದಿಗೆ ನ.11ರ ಮಧ್ಯರಾತ್ರಿಯ ವರೆಗೆ ಹಳೆಯ ನೋಟುಗಳನ್ನು ಸ್ವೀಕರಿಸುತ್ತೇವೆಂದು ಅಧಿಕಾರಿಗಳು ಪ್ರಕಟಿಸಿದ ಬಳಿಕ ಹಲವು ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್‌ಗಳಲ್ಲಿ ಜನರು ಇರುವೆಗಳಂತೆ ಸರತಿಯ ಸಾಲಲ್ಲಿ ನಿಂತರು. ಅವರಲ್ಲಿ ಹೆಚ್ಚಿನವರು ಹಳೆಯ ನೋಟು ನೀಡಿ ಮುಂಗಡ ಬುಕಿಂಗ್ ಮಾಡುವವರಾಗಿದ್ದರು. ಆ ಬಳಿಕ ಟಿಕೆಟ್ ರದ್ದತಿ ಮಾಡಿದರೂ, ಅಲ್ಪ ಶುಲ್ಕ ಕಡಿತದೊಂದಿಗೆ ಹೊಸ ನೋಟುಗಳು ದೊರೆಯುತ್ತವೆಂಬುದು ಇದರಲ್ಲಿರುವ ಗುಟ್ಟಾಗಿದೆ.

ಅಂತೂ, ಸರಕಾರ ಚಾಪೆಯ ಕೆಳಗೆ ನುಸುಳಿದರೆ ಭ್ರಷ್ಟರು ರಂಗೋಲಿಯ ಕೆಳಗೆ ನುಸುಳುತ್ತಿದ್ದಾರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News