ಸಮರ್ಪಕ ಮಾಹಿತಿ ಕೊರತೆಯಿಂದ ತಂತ್ರಜ್ಞಾನ ದುರ್ಬಳಕೆ: ಶ್ರೀನಿಧಿ

Update: 2016-11-20 16:19 GMT

ಮೂಡಬಿದ್ರೆ, ನ. 20: ಸಮರ್ಪಕ ಮಾಹಿತಿ ಕೊರತೆಯಿಂದಾಗಿ ಇಂದು ತಂತ್ರಜ್ಞಾನದ ದುರ್ಬಳಕೆಯಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಕಾನೂನು ಅರಿವು ಮೂಡಿಸುವ ಅಗತ್ಯವಿದೆ ಎಂದು ಯುವ ತಂತ್ರಜ್ಞ ಟಿ.ಜಿ.ಶ್ರೀನಿಧಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಂದು ಮೂಡಬಿದರೆಯಲ್ಲಿ ನಡೆದ ‘ಆಳ್ವಾಸ್ ನುಡಿಸಿರಿ-2016’ ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ರತ್ನಾಕರವರ್ಣಿ ವೇದಿಕೆಯ ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ‘ತಂತ್ರಜ್ಞಾನ’ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ತಂತ್ರಜ್ಞಾನದ ದುರ್ಬಳೆಯಿಂದಾಗಿ ಇಂದು ತಪ್ಪು ಮಾಹಿತಿಗಳು, ಸಂದೇಶಗಳು ಸಮಾಜದಲ್ಲಿ ಹರಿದಾಡುತ್ತಿವೆ. ವಾಟ್ಸ್‌ಆ್ಯಪ್ ಮತ್ತಿತರ ಸಾಮಾಜಿಕ ಜಾಲ ತಾಣಗಳ ಇಂದು ಉಪಯೋಗಕ್ಕಿಂತ ದುರುಪಯೋಗಗಳು ಕಂಡುಬರುತ್ತಿವೆ. ಕೆಲವರ ದ್ವೇಷ ಸಾಧನೆಗಾಗಿ ಮತ್ತೆ ಕೆಲವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಸ್ವೀಕೃತವಾದ ಸಂದೇಶಗಳು ನಾವು ಇತರರಿಗೆ ಕಳುಹಿಸುವುದಕ್ಕಿಂತ ಮುಂಚೆ ಅವುಗಳಲ್ಲಿ ಎಷ್ಟು ಸತ್ಯಾಂಶವಿದೆ, ಎಷ್ಟು ಸುಳ್ಳುಗಳ ಕಂತೆ ಇವೆ ಎಂಬುದನ್ನು ಪರಾಂಬರಿಸಿ ಕಳುಹಿಸಬೇಕು. ನಿಯಮಗಳನ್ನು ಗಾಳಿಗೆ ತೂರಿ ಕಳುಹಿಸುವ ಸಂದೇಶಗಳು ಸಾಮಾಜಿಕ ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಆದ್ದರಿಂದ ತಂತ್ರಜ್ಞಾನ ಬಳಸುವವರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವುದು ಅಗತ್ಯವಾಗಿದೆ ಎಂದರು.

ಕಂಪ್ಯೂಟರ್ ಎಂದರೆ ಇಂಗ್ಲಿಷ್ ಅಲ್ಲ

ಇಂದು ತಂತ್ರಜ್ಞಾನ ಬೆಳೆದಿದೆ. ಒಂದು ಕಾಲದಲ್ಲಿ ಕೇವಲ ಆಂಗ್ಲ ಭಾಷೆಗೆ ಮಾತ್ರ ಸೀಮಿತಗೊಂಡಿದ್ದ ಗೂಗಲ್ ಸಂಸ್ಥೆ ಇಂದು ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆ ನೀಡಿದೆ. ಕಂಪ್ಯೂಟರ್‌ನಲ್ಲಿ ಏನಾದರೂ ಹುಡುಕಬೇಕಾದರೆ, ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯವಾಗಿತ್ತು. ಆದರೆ, ಇಂದು ಕನ್ನಡ ಭಾಷೆ ಸಹಿತ ಇತರ ಸ್ಥಳೀಯ ಭಾಷೆಗಳಲ್ಲೂ ತಂತ್ರಜ್ಞಾನ ಲಭ್ಯವಿದೆ. ಇದು ಸ್ಥಳೀಯ ಭಾಷೆಗಳ ಅಗತ್ಯತೆಯನ್ನು ಸೂಚಿಸುತ್ತದೆ. ತಂತ್ರಜ್ಞಾನದ ಬಳಕೆಯನ್ನು ಜನರಿಗೆ ಪರಿಚಯಿಸಬೇಕಾಗಿದೆ. ಟಿವಿ, ಮೊಬೈಲ್, ಕಂಪ್ಯೂಟರ್, 4ಜಿ ಸಂಪರ್ಕಗಳಲ್ಲೂ ಕನ್ನಡ ಭಾಷೆ ಕನ್ನಡ ಭಾಷೆ ಅಳವಡಿಸಬೇಕಾದ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News