ಅಚ್ಛೇ ದಿನ್ ಕಳೆದುಕೊಂಡ ಪಾನ್ ವಾಲಾ!
ಪಾಟ್ನಾ, ನ.21: ಜಾರ್ಖಂಡ್ ರಾಜ್ಯದ ಗಿರಿಡಿಹ್ ಜಿಲ್ಲೆಯ ಸಾಮಾನ್ಯ ಪಾನ್ ವಾಲಾ ದಿನ ಬೆಳಗಾಗುವುದರೊಳಗಾಗಿ ತನ್ನ ಬ್ಯಾಂಕ್ ಖಾತೆಯಲ್ಲಿ ರೂ 9.99 ಕೋಟಿ ಹೊಂದಿರುವ ಘಟನೆಯೊಂದು ವರದಿಯಾಗಿದೆ. ಕಾಳಧನ ಹೊಂದಿರುವವರು ಅದನ್ನು ವಿಲೇವಾರಿಗೊಳಿಸುವ ನಿಟ್ಟಿನಲ್ಲಿ ಈ ಅಮಾಯಕನ ಬ್ಯಾಂಕ್ ಖಾತೆಗೆ ಅದನ್ನು ಜಮೆಗೊಳಿಸಿರಬಹುದೆಂದು ತನಿಖಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಪಪ್ಪು ಕುಮಾರ್ ತಿವಾರಿ ಎಂಬ ಹೆಸರಿನ ಯುವ ಪಾನ್ ವಾಲಾನೊಬ್ಬ ಗಿರಿಡಿಹ್ ಜಿಲ್ಲೆಯ ಗಂಡೆ ಎಂಬಲ್ಲಿ ಪಾನ್ ಅಂಗಡಿಯೊಂದನ್ನು ಹೊಂದಿದ್ದಾನೆ. ಆತ ಎಟಿಎಂ ಒಂದರಲ್ಲಿ ರೂ 1000 ಹಿಂಪಡೆಯಲು ಹೋಗಿದ್ದಾಗ ಆತನ ಎಸ್ ಬಿ ಐ ಖಾತೆಯನ್ನು ಬ್ಯಾಂಕ್ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆಂದು ತಿಳಿದು ಆಶ್ಚರ್ಯವಾಯಿತು.
ಆತ ಹಲವಾರು ಎಟಿಎಂಗಳನ್ನು ಸುತ್ತಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಆತ ಹತ್ತಿರದ ಎಸ್ ಬಿ ಐ ಶಾಖೆಗೆ ಹೋಗಿ ತನ್ನ ಖಾತೆಯಲ್ಲಿ ರೂ 4,580 ಇದ್ದರೂ ತನಗೇಕೆ ರೂ.1000 ಹಿಂಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಳಿದಾಗ ಬ್ಯಾಂಕ್ ಅಧಿಕಾರಿಗಳು ಆತನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅಲ್ಲಿಯ ತನಕ ಆತನಿಗೆ ನಿಜಸಂಗತಿಯೇನೆಂದು ತಿಳಿದಿರಲಿಲ್ಲ. ಆದರೆ ಆತನೊಬ್ಬ ಸಾಮಾನ್ಯ ಪಾನ್ ವಾಲಾ ಎಂದು ಅಧಿಕಾರಿಗಳು ಒಪ್ಪಲು ತಯಾರಿರಲಿಲ್ಲ. ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡಿದಾಗ ಆತನಿಗೆ ಆಘಾತವಾಗಿತ್ತು. ನಂತರವಷ್ಟೇ ಅಧಿಕಾರಿಗಳು ಆತನ ಬ್ಯಾಂಕ್ ಖಾತೆಯಲ್ಲಿ ರೂ 9,99,95,498 ಇದೆ ಹಾಗೂ ಹೈದರಾಬಾದಿನ ಸೈಬರ್ ಕ್ರೈಮ್ ಘಟಕ ಆತನ ಖಾತೆಯನ್ನು ಬ್ಲಾಕ್ ಮಾಡಿದೆ ಎಂದು ತಿಳಿಸಿದರು.
ತನ್ನ ಬಳಿ ಈವರೆಗೆ ಇದ್ದ ಅತ್ಯಧಿಕ ಮೊತ್ತವೆಂದರೆ ರೂ 1.5 ಲಕ್ಷ ಎಂದು ತಿವಾರಿ ಹೇಳಿದ್ದಾನೆ. ಯಾವುದೇ ಕೆಲಸ ಮಾಡದೆ ಇಷ್ಟೊಂದು ಹಣ ನನ್ನ ಬ್ಯಾಂಕ್ ಖಾತೆಯಲ್ಲಿ ಹೊಂದುವುದು ನನಗಿಷ್ಟವಿಲ್ಲ ಎಂದು ಹೇಳುವ ತಿವಾರಿ ತನಗೆ ಹಾಗೂ ತನ್ನ ಕುಟುಂಬಕ್ಕೆ ನಿದ್ದೆ ಬರದಂತಾಗಿದೆ ಎಂದಿದ್ದಾನೆ.
ಘಟನೆಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ