2000 ರೂ. ನೋಟು ಅಕ್ರಮ, ಪ್ರಧಾನಿಯಿಂದ ಆರ್ಥಿಕ ಅರಾಜಕತೆ: ಕಾಂಗ್ರೆಸ್
ಹೊಸದಿಲ್ಲಿ, ನ.21: ಎರಡು ಸಾವಿರ ಮುಖಬೆಲೆಯ ಹೊಸ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿ ಸಂಬಂಧಿತ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಪಾಲಿಸಿಲ್ಲ ಎಂದು ದೂರಿರುವ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ಸಂಸತ್ತಿನ ಹೊರಗೂ ಒಳಗೂ ಎತ್ತುವುದಾಗಿ ಹೇಳಿತು.
ಪ್ರಧಾನಿ ದೇಶವನ್ನು ಆರ್ಥಿಕ ಅರಾಜಕತೆಯತ್ತ ತಳ್ಳಿದ್ದಾರೆಂದು ದೂರಿದ ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮ, 2000 ರೂ.ನೋಟುಗಳನ್ನು ಚಲಾವಣೆಗೆ ತಂದಿರುವ ಕ್ರಮ ಅಕ್ರಮ ಎಂದು ಬಣ್ಣಿಸಿದರಲ್ಲದೆ ನೋಟು ಮುದ್ರಿಸುವ ಮುನ್ನ ಆರ್ ಬಿಐ ಕಾಯಿದೆಯನ್ವಯ ನೋಟಿಫಿಕೇಶನ್ ಜಾರಿಗೊಳಿಸಬೇಕೆಂಬ ನಿಯಮವಿದ್ದರೂ ಈ ನಿಯಮ ಪಾಲನೆಯಾಗಿಲ್ಲವೆಂದರು.
ಅಮಾನ್ಯಗೊಂಡ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡುವವರ ಕೈಗೆ ಶಾಯಿ ಗುರುತು ಹಾಕುವ ಕ್ರಮವನ್ನೂ ಅವರು ವಿರೋಧಿಸಿದರು.
ರಾಜ್ಯಸಭೆಯಲ್ಲಿ ವಿಪಕ್ಷ ಉಪ ನಾಯಕರೂ ಆಗಿರುವ ಶರ್ಮ, ಪ್ರಧಾನಿ ಜನರ ಗಮನವನ್ನು ಮುಖ್ಯ ಉದ್ದೇಶದಿಂದ ಬೇರೆಡೆ ಸೆಳೆಯುವ ಪ್ರಯತ್ನ ಮಾಡತ್ತಿದ್ದಾರೆಂದು ಆರೋಪಿಸಿದ್ದಾರೆ. ``ರಾಷ್ಟ್ರವಾದಿಯೆಂಬ ಸೋಗಿನಲ್ಲಿ ಕಾಳಧನದ ವಿರುದ್ಧ ಸಮರ ಸಾರಿದ್ದೇನೆಂದು ಘೋಷಿಸಿಕೊಂಡು ಬಡವರನ್ನು ಪ್ರಧಾನಿ ಮೂರ್ಖರನ್ನಾಗಿಸುತ್ತಿದ್ದಾರೆ'' ಎಂದು ಶರ್ಮ ಆರೋಪಿಸಿದರು.
ಈಗಿನ ಪರಿಸ್ಥಿತಿಗೆ ಪ್ರಧಾನಿಯೇ ಕಾರಣವೆಂದು ದೂರಿದ ಅವರು ದೇಶದಲ್ಲಿ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯಿದೆ, ಎಂದರು.
``ಈಗಾಗಲೇ ಹೊಸ 2000 ರೂ ನಕಲಿ ನೋಟುಗಳೂ ಚಲಾವಣೆಯಲ್ಲಿರುವುದರಿಂದ ಸರಕಾರ ಕಾಳಧನ ಚಲಾವಣೆಯನ್ನು ಹೇಗೆ ನಿಯಂತ್ರಿಸುವುದು ?'' ಎಂದು ಪ್ರಶ್ನಿಸಿದ ಅವರು ಪ್ರಧಾನಿ ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ದೂರಿದರು.