×
Ad

ಸಿಎಂ ಸುರಕ್ಷತಾ ಹೊಣೆ ಹೊತ್ತ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಣಿ ಸುಭಾಷಿಣಿ

Update: 2016-11-21 14:24 IST

ಹೊಸದಿಲ್ಲಿ, ನ.21: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮುಖ್ಯಮಂತ್ರಿಯೊಬ್ಬರ ಸುರಕ್ಷೆಯ ಹೊಣೆಗಾರಿಕೆ ಹೊತ್ತುಕೊಂಡ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ ಸುಭಾಷಿಣಿ ಶಂಕರನ್. ಸೆಪ್ಟೆಂಬರ್ ತಿಂಗಳಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಹೊಜೈ ನಿಂದ ಗುವಾಹಟಿಗೆ  ತೆರಳುವಾಗ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಉಸ್ತುವಾರಿಯನ್ನು ಸುಭಾಷಿಣಿಯವರಿಗೆ ವಹಿಸಲಾಗಿತ್ತು.

ಮುಖ್ಯಮಂತ್ರಿ ಹೋಗುವ ದಾರಿಗಳನ್ನು ಅವರಿಗಾಗಿ ಸುರಕ್ಷಿತಗೊಳಿಸುವುದು, ಸಂಬಂಧಿತ ಸುರಕ್ಷಾ ತಂಡಗಳೊಂದಿಗೆ  ನಿಕಟ ಸಂಪರ್ಕದಿಂದಿರುವುದು,   ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವುದು ಮುಂತಾದ   ಕಾರ್ಯಗಳನ್ನು ಆಕೆ ನಿರ್ವಹಿಸಬೇಕಿತ್ತು. ಈ ದಕ್ಷ ಅಧಿಕಾರಿಣಿ ತಮಗೆ ನೀಡಿದ ಎಲ್ಲಾ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಸುಭಾಷಿಣಿ ಅವರ ಹುಟ್ಟೂರು. ಅವರ ತಂದೆ ಖಾಸಗಿ ಕಂಪೆನಿಯೊಂದರ ಕೈಗಾರಿಕಾ ಸುರಕ್ಷಾ ವಿಭಾಗದಲ್ಲಿ ಉದ್ಯೋಗಿಯಾಗಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ. 80ರ ದಶಕದಲ್ಲಿ ಸುಭಾಷಿಣಿಯ ಹೆತ್ತವರು ಮುಂಬೈಗೆ ಸ್ಥಳಾಂತರಗೊಂಡ ನಂತರ ಆಕೆ ಥಾಣೆ ಹಾಗೂ ಕಲ್ಯಾಣ್ ನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮುಂದೆ  ಸೈಂಟ್ ಕ್ಸೇವಿಯರ್ ಕಾಲೇಜಿನಿಂದ ಸಮಾಜಶಾಸ್ತ್ರದಲ್ಲಿ  ಪದವಿ ಪಡೆದರು. ನಂತರ ದೆಹಲಿಯ ಜೆ ಎನ್ಯು ವಿನಲ್ಲಿ ಸ್ನಾತ್ತಕೋತ್ತರ ಪದವಿ ತರಗತಿಗಳಿಗೆ ಸೇರಿದ ಅವರು ಅದೇ ಸಮಯ ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿದ್ದರು.

ಐಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅವರು ಹೈದರಾಬಾದಿನ ಸರ್ದಾರ್ ವಲ್ಲಭಭಾಯಿ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಅಸ್ಸಾಂನಲ್ಲಿ ಅವರಿಗೆ ಮೊದಲ ಪೋಸ್ಟಿಂಗ್ ದೊರೆಯಿತು.  ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವವರ ಸುರಕ್ಷಾ ಮುಖ್ಯಸ್ಥೆಯಾಗಿ ಆಕೆಯನ್ನು ಯಾರಾದರೂ ನೋಡಿದಾಗ ಒಮ್ಮೆ  ಆಕೆ ವಕೀಲೆಯೇನೋ ಎಂಬಂಥಹ ಭಾವನೆ ಹಲವರಿಗೆ ಬಂದದ್ದಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಆಕೆ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಶರ್ಟ್ ಹಾಗೂ ಕಪ್ಪು ಕೋಟು ಧರಿಸುತ್ತಾರೆ. ಇಂತಹ ಸಮವಸ್ತ್ರ ಆಕೆಗೆ ತನ್ನ ಬಳಿಯಿರುವ ಪಿಸ್ತೂಲನ್ನೂ ಯಾರಿಗೂ  ಕಾಣಿಸದಂತೆ ಇಡಲು ಸಹಕಾರಿಯಾಗಿದೆ.

ಅಸ್ಸಾಂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸಾಕಷ್ಟು ಸವಾಲಿನ ಕೆಲಸವಾಗಿದ್ದು  ಮಾವೋವಾದಿಗಳ ಹಾವಳಿ, ಮತೀಯ ಉದ್ವಿಗ್ನತೆ, ಕಾಡು ಪ್ರಾಣಿಗಳ ಹತ್ಯೆ, ಡ್ರಗ್ಸ್ ಜಾಲ ಇವುಗಳೆಲ್ಲವೂ  ಪೊಲೀಸ್ ಅಧಿಕಾರಿಯೊಬ್ಬರ ದಕ್ಷತೆಯನ್ನು ಪರೀಕ್ಷಿಸುತ್ತವೆ.
ಮುಖ್ಯಮಂತ್ರಿಯ ಸುರಕ್ಷಾ ವಿಭಾಗದ  ಎಸ್ಪಿಯಾಗುವ ಮೊದಲು ಸುಭಾಷಿಣಿ ಅಸ್ಸಾಂ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಮೊದಲು ಆಕೆ ಗುವಾಹಟಿಯ ಅಝಾರ ಪೊಲೀಸ್ ಠಾಣೆಯಲ್ಲಿ ಎಎಸ್ಪಿಯಾಗಿ  ಕಾರ್ಯನಿರ್ವಹಿಸಿದ್ದು  ನಂತರ ಬಿಸ್ವನಾಥ್ ಜಿಲ್ಲೆ, ಸಿಲ್ಚಾರ್ ಹಾಗೂ ತೇಜಪುರದಲ್ಲಿ ಹೆಚ್ಚುವರಿ ಎಸ್ಪಿ ಆಗಿ ಕೆಲಸ ಮಾಡಿದ್ದರು. ಡಿಸೆಂಬರ್ 23, 2014 ರಲ್ಲಿ ಉಗ್ರಗಾಮಿಗಳು ಸೋನಿತ್ ಪುರ ಜಿಲ್ಲೆಯಲ್ಲಿ 30 ಮಂದಿ ಆದಿವಾಸಿಗಳನ್ನು ಹತ್ಯೆಗೈದಾಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಲ್ಲಿಗೆ ಧಾವಿಸಿದ್ದ ಸುಭಾಷಿಣಿ ನೇತೃತ್ವದ ಪೊಲೀಸ್ ತಂಡವು ಗ್ರಾಮಸ್ಥರು ತಮ್ಮವರ ಕಳೇಬರಗಳನ್ನು ನೋಡಿ ಉದ್ವಿಗ್ನಗೊಳ್ಳುವ ಮುನ್ನ ಅವುಗಳನ್ನು ಅಲ್ಲಿಂದ ಸಾಗಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.

ಆಕೆ ಜೆ ಎನ್ ಯುವಿನಲ್ಲಿ ತನ್ನ ಎಂಫಿಲ್ ಗಾಗಿ ಆಯ್ದುಕೊಂಡ ವಿಷಯ `ಮಹಿಳೆ ಮತ್ತು ಉಗ್ರವಾದ' ವಾಗಿತ್ತು. ಸುಭಾಷಿಣಿಯ ಕಾರ್ಯನಿರ್ವಹಣಾ ಶೈಲಿ ಈಗಾಗಲೇ ಸಾಕಷ್ಟು ಮಂದಿಯಿಂದ ಪ್ರಶಂಸೆಗೊಳಗಾಗಿದ್ದು ಆಕೆ ಯುವತಿಯರು ಪೊಲೀಸ್ ಇಲಾಖೆಗೆ ಸೇರಲು ಸ್ಫೂರ್ತಿಯಾಗಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News