ದಕ್ಷಿಣ ಚೀನಾ ಸಮುದ್ರದಲ್ಲಿ ‘ಮೀನುಗಾರಿಕೆ ನಿಷೇಧ’ ವಲಯ ಘೋಷಣೆಗೆ ಫಿಲಿಪ್ಪೀನ್ಸ್ ಸಿದ್ಧತೆ
ಮನಿಲಾ (ಫಿಲಿಪ್ಪೀನ್ಸ್), ನ. 21: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದ ದ್ವೀಪದಲ್ಲಿರುವ ವಿಶಾಲ ಕಡಲ್ಕೊಳ (ಲಗೂನ್)ವನ್ನು ಸಾಗರ ರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ನಿರ್ಧರಿಸಿದ್ದಾರೆ. ರಕ್ಷಿತ ಪ್ರದೇಶದಲ್ಲಿ ಫಿಲಿಪ್ಪೀನ್ಸ್ ಪ್ರಜೆಗಳು ಮತ್ತು ಚೀನೀಯರು ಮೀನುಗಾರಿಕೆ ನಡೆಸುವಂತಿಲ್ಲ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಅಧಿಕಾರಿಗಳು ಹೇಳಿದ್ದಾರೆ.
ಪೆರುವಿನಲ್ಲಿ ಈಗಷ್ಟೇ ಮುಕ್ತಾಯಗೊಂಡ ಏಶ್ಯ ಪೆಸಿಫಿಕ್ ಆರ್ಥಿಕ ಸಹಕಾರ ವೇದಿಕೆಯ ನೇಪಥ್ಯದಲ್ಲಿ ನಡೆದ ಸಭೆಯಲ್ಲಿ, ಡುಟರ್ಟ್ ತನ್ನ ಯೋಜನೆಯ ಬಗ್ಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಮಾಹಿತಿ ನೀಡಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಹರ್ಮೋಜಿನಿಸ್ ಎಸ್ಪರನ್ ಜೂನಿಯರ್ ತಿಳಿಸಿದರು.
ಡುಟರ್ಟ್ ಸ್ಕಾರ್‌ಬೋರೊ ದ್ವೀಪದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆ ತನಗೆ ಒಪ್ಪಿಗೆಯೇ ಎಂಬುದನ್ನು ಕ್ಸಿ ತಿಳಿಸಲಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಎಸ್ಪರನ್ ಮತ್ತು ಇತರ ಅಧಿಕಾರಿಗಳು ತಿಳಿಸಿದರು.
2012ರಲ್ಲಿ ಸಾಗರಪ್ರದೇಶದ ವಿಷಯದಲ್ಲಿ ಫಿಲಿಪ್ಪೀನ್ಸ್ ಜೊತೆಗಿನ ವಿವಾದ ತಾರಕಕ್ಕೇರಿದ್ದಾಗ, ಚೀನಾ ಸ್ಕಾರ್‌ಬೋರೊ ದ್ವೀಪವನ್ನು ವಶಪಡಿಸಿಕೊಂಡಿತ್ತು.
ಡುಟರ್ಟ್‌ರ ಯೋಜನೆ ವಿವಾದಾಸ್ಪವಾಗುವ ಸಾಧ್ಯತೆಯಿದೆ. ಯಾಕೆಂದರೆ, ಇದುದ ಆಯಕಟ್ಟಿನ ದ್ವೀಪದ ಮೇಲೆ ಫಿಲಿಪ್ಪೀನ್ಸ್ ಭೌಗೋಳಿ ನಿಯಂತ್ರಣ ಹೊಂದಿದೆ ಎನ್ನುವುದನ್ನು ಸೂಚಿಸಬಹುದಾಗಿದೆ.
ಈ ದ್ವೀಪವನ್ನು ಚೀನಾದ ತಟರಕ್ಷಣಾ ಪಡೆಗಳು ನಿಕಟವಾಗಿ ಗಮನಿಸುತ್ತಿವೆ.