ನ.23ರಂದು ಗ್ರಾಮಸಹಾಯಕರಿಂದ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ

Update: 2016-11-21 16:12 GMT

ಉಡುಪಿ, ನ.21: ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಿ ‘ಡಿ’ ದರ್ಜೆ ನೌಕರರೆಂದು ಪರಿಗಣಿಸಲು ಸರಕಾರವನ್ನು ಒತ್ತಾಯಿಸುವುದಕ್ಕೆ ಹಾಗೂ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲು ನ.23ರಂದು ಬೆಳಗಾವಿ ಸುವರ್ಣ ಸೌಧಕ್ಕೆ ನಾವು ಕುಟುಂಬ ಸಮೇತ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಹೇಳಿದ್ದಾರೆ.

ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸದೇ ಮಾಸಿಕ 7,000 ರೂ. ಮಾತ್ರ ವೇತನ ನೀಡುತಿದ್ದು, ಕಳೆದ ಜುಲೈ ತಿಂಗಳಿನಿಂದ ಇದುವರೆಗೆ ಆ ಸಂಬಳವೂ ನಮಗೆ ಬಂದಿಲ್ಲ ಎಂದರು. ನಮಗೆ ಬಾಕಿ ಇರುವ ಸಂಬಳವನ್ನು ಪಾವತಿಸಿ, ಡಿ ಗೂಪ್ ನೌಕರರೆಂದು ಮಾನ್ಯತೆ ನೀಡಬೇಕೆಂದು ನಮ್ಮ ಪ್ರಧಾನ ಬೇಡಿಕೆಗಳಾಗಿವೆ ಎಂದರು.

ರಾಜ್ಯ ಸರಕಾರ 1978 ಹಾಗೂ 82ರಲ್ಲಿ ಹೊರಡಿಸಿದ ಆದೇಶದಂತೆ ರಾಜ್ಯದಲ್ಲಿ 10450 ಗ್ರಾಮ ಸಹಾಯಕ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಈ ಹುದ್ದೆಯನ್ನು ಕಳೆದ 37 ವರ್ಷಗಳಿಂದಲೂ ಪದೇ ಪದೇ ಮುಂದುವರಿಸಿದೆ. 2007ರ ಜು.10ರ ಆದೇಶದಂತೆ ಸರಕಾರ ರಾಜ್ಯದಲ್ಲಿರುವ 10450 ಗ್ರಾಮ ಸಹಾಯಕರ ಹುದ್ದೆಯನ್ನು ಕಂದಾಯ ಇಲಾಖೆಯಲ್ಲಿ ಖಾಯಂಗೊಳಿಸಿತ್ತು ಎಂದವರು ವಿವರಿಸಿದರು.

ಆದರೆ ಕಳೆದ 38 ವರ್ಷಗಳಿಂದ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜೀತದಾಳುಗಳಂತೆ ಸರಕಾರದ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಅಂದಿನಿಂದ ಗ್ರಾಮ ಸಹಾಯಕರಿಗೆ 7000ರೂ. ಸಂಭಾವನೆ ಬಿಟ್ಟು ಬೇರೆ ಯಾವುದೇ ಭತ್ಯೆಗಳನ್ನು ನೀಡುತ್ತಿಲ್ಲ. ಈ ಸಂಬಳದಲ್ಲಿ ಜೀವನ ಸಾಗಿಸುವುದೇ ಇಂದು ಕಷ್ಯವೆನಿಸಿದೆ ಎಂದು ಚಂದ್ರಶೇಖರ ಶೆಟ್ಟಿಗಾರ್ ನುಡಿದರು.

ಈ ವರ್ಷದ ಬಜೆಟ್‌ನಲ್ಲಿ ಎಪ್ರಿಲ್‌ನಿಂದ ಅನ್ವಯವಾಗುವಂತೆ ನಮ್ಮ ವೇತನದಲ್ಲಿ 3000ರೂ. ಹೆಚ್ಚಳ (ಒಟ್ಟು 10,000ರೂ.) ಮಾಡಿ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ. ಆದರೆ ಇದಾಗಿ ಆರು ತಿಂಗಳಾದರೂ ಇನ್ನು ಕೂಡಾ ಈ ಸಂಬಳ ನಮ್ಮ ಕೈಸೇರಿಲ್ಲ ಎಂದು ಶೆಟ್ಟಿಗಾರ್ ಅಳಲು ತೋಡಿಕೊಂಡರು.

ಆದುದರಿಂದ 23,000 ದಿನಕೂಲಿ ನೌಕರರನ್ನು ಖಾಯಂಗೊಳಿಸಿದಂತೆ ಗ್ರಾಮಸಹಾಯಕರಿಗೂ ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆ ಒದಗಿಸಿಕೊಡುವಂತೆ ಮಾಡಿದ ಮನವಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಆದುದರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲು ರಾಜ್ಯ ಗ್ರಾಮ ಸಹಾಯಕರ ಸಂಘ ನ.23ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಕರೆ ನೀಡಿದೆ. ಈ ಬಗ್ಗೆ ನಾವು ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಬೇಡಿಕೆಗಳು

ಸೇವಾ ನಿಯಮಾವಳಿ ರಚಿಸಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರಿಗೆ ಮುಂಭಡ್ತಿ ನೀಡಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಮಾಡಬೇಕು.

ಗ್ರಾಮ ಸಹಾಯಕರ ವೇತನವನ್ನು 4 ಅಥವಾ 8 ತಿಂಗಳಿಗೊ ನೀಡುವ ಬದಲು ಪ್ರತಿ ತಿಂಗಳು ನಿರಂತರವಾಗಿ ನೀಡಬೇಕು.

ವೇತನ ಅನುದಾನವನ್ನು ಪ್ರಾದೇಶಿಕ ಆಯುಕ್ತರಿಗೆ ನೀಡುವ ಬದಲು ಈ ಹಿಂದಿನಂತೆ ಜಿಲ್ಲಾಧಿಕಾರಿಗಳಿಗೆ ನೇರವಾಗಿ ನೀಡಬೇಕು.

ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ ಎರಡು ಲಕ್ಷ ರೂ.ಪರಿಹಾರ ಧನ ಹಾಗೂ ಮಾಸಿಕ ಪಿಂಚಣಿ ನೀಡಬೇಕು.

ಉಳಿದ ಸರಕಾರಿ ನೌಕರರಿಗೆ ನೀಡುವ ವೈದ್ಯಕೀಯ ಭತ್ಯೆಯನ್ನು ಗ್ರಾಮಸಹಾಯಕರ ಕುಟುಂಬಕ್ಕೂ ಮಂಜೂರು ಮಾಡಬೇಕು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ನಾಯಕ್, ಕುಂದಾಪುರದ ಆನಂದ್, ಕಾರ್ಕಳದ ಜಗದೀಶ್ ಪ್ರಭು ಹಾಗೂ ಮಹೇಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News