ನ.22ರಂದು ಸಹಕಾರ ಸಂಘಗಳಿಂದ ತುರ್ತು ಸಮಾಲೋಚನಾ ಸಭೆ

Update: 2016-11-21 17:48 GMT

ಉಡುಪಿ, ನ.21: ಕೇಂದ್ರ ಸರಕಾರ ಕಾಳಧನ ನಿರ್ಮೂಲನೆಗಾಗಿ 500 ಹಾಗೂ 1000ರೂ. ಮುಖಬೆಲೆಯ ನೋಟುಗಳ ರದ್ಧತಿಯನ್ನು ಘೋಷಿಸಿದ ಬೆನ್ನಲ್ಲೆ ಜಿಲ್ಲೆಯಲ್ಲಿ ಕ್ರೆಡಿಟ್ ವ್ಯವಹಾರಗಳನ್ನು ಮಾಡುತ್ತಿರುವ ಪತ್ತಿನ ಸಹಕಾರ ಸಂಘಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ನೇತೃತ್ವದಲ್ಲಿ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳ ಸಮಾಲೋಚನಾ ಸಭೆಯನ್ನು ನಾಳೆ ಅಪರಾಹ್ನ 3:00ಗಂಟೆಗೆ ಅಜ್ಜರಕಾಡಿನಲ್ಲಿರುವ ಪುರಭವನದ ಮಿನಿ ಹಾಲ್‌ನಲ್ಲಿ ಕರೆಯಲಾಗಿದೆ.

ಸರಕಾರದ ನಿರ್ದೇಶನವನ್ನು ಅಕ್ಷರಶ: ಪಾಲಿಸಿ ಸುಮಾರು 10 ದಿನಗಳಿಂದ ಸಂಘಗಳ ವ್ಯವಹಾರ ಬಹುತೇಕ ಸ್ಥಗಿತಗೊಂಡಿದೆ. ಇದರೊಂದಿಗೆ ದುರದೃಷ್ಟವಶಾತ್ ಭಾರತೀಯ ರಿಸರ್ವ್ ಬ್ಯಾಂಕ್ ನ.14ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸಾರ್ವಜನಿಕರು ವ್ಯಕ್ತಿಗತವಾಗಿ ಪ್ರತಿ ವಾರ ಬ್ಯಾಂಕು ಖಾತೆಗಳಿಂದ ಹಿಂಪಡೆಯಬಹುದಾದ ಹಣದ ಮಿತಿಯನ್ನೇ ಸಹಕಾರ ಸಂಘಗಳಿಗೂ ವಿಸ್ತರಿಸಿ ಆದೇಶ ಹೊರಡಿಸಿರುವುದರಿಂದ ಈಗಾಗಲೇ ಸ್ಥಗಿತ ಹಂತಕ್ಕೆ ಬಂದಿರುವ ಸಹಕಾರ ಸಂಘಗಳ ಆರ್ಥಿಕ ಚಟುವಟಿಕೆ ಇನ್ನಷ್ಟು ಕಮರಿ ಹೋಗುವ ಭೀತಿಯನ್ನು ಸಂಘಗಳು ವ್ಯಕ್ತಪಡಿಸಿವೆ.

ಇದರಿಂದ ಸಾಲ ನೀಡಿಕೆ ಹಾಗೂ ಸಾಲ ವಸೂಲಾತಿಯಲ್ಲಿ ತೀವ್ರ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಈ ಸಂಬಂಧ ಚರ್ಚಿಸಿ ಅಭಿಪ್ರಾಯ ಕ್ರೋಢೀಕರಿಸಿ ಕ್ಷಿಪ್ರ ಪರಿಹಾರ ಕಂಡುಕೊಳ್ಳಲು ಜಿಲ್ಲೆಯ ಎಲ್ಲಾ ಪತ್ತಿನ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News