ಉಡುಪಿ: ನಾಳೆಯಿಂದ ರಾಜ್ಯಮಟ್ಟದ ನಾಟಕ ಸ್ಪರ್ಧೆ

Update: 2016-11-21 18:19 GMT

ಉಡುಪಿ, ನ.21: ಸುವರ್ಣ ಸಂಭ್ರಮದಲ್ಲಿರುವ ಉಡುಪಿ ರಂಗಭೂಮಿ ವತಿಯಿಂದ ಡಾ.ಟಿ.ಎಂ.ಎ.ಪೈ, ಎಸ್.ಎಲ್.ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ್ ಸ್ಮರಣಾರ್ಥ 37ನೆ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯು ನ.23ರಿಂದ ಡಿ.5ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.

ನ.23ರ ಸಂಜೆ 6:30ಕ್ಕೆ ಉದ್ಯಮಿ ಗೋಪಾಲ ಸಿ.ಬಂಗೇರ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ರಂಗಭೂಮಿ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವನ್ನು ಡಿ.10ರಿಂದ 14ರವರೆಗೆ ಹಮ್ಮಿಕೊಳ್ಳಲಾಗುವುದು ಎಂದು ರಂಗಭೂಮಿ ಸುವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಯು. ಉಪೇಂದ್ರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

23ರಂದು ಸುಬ್ರಹ್ಮಣ್ಯ ಕುಸುಮ ಸಾರಂಗ ತಂಡದಿಂದ ‘ಸಂಸಾರದಲ್ಲಿ ಸನಿದಪ’, 24ರಂದು ಬೆಂಗಳೂರು ಪ್ರವರ ಆರ್ಟ್ ಸ್ಟುಡಿಯೋ ಟ್ರಸ್ಟ್ ‘ಜತೆಗಿರುವನು ಚಂದಿರ’, 25ರಂದು ಹಾಸನ ರಂಗಸಿರಿ ಹವ್ಯಾಸಿ ಕಲಾತಂಡದಿಂದ ‘ಕಂಬಾಲಪಲ್ಲಿ’, 26ರಂದು ತುಮಕೂರು ಸಮ್ಮತ ಥಿಯೇಟರ್ ತಂಡದಿಂದ ‘ವೌನಿ’, 27ರಂದು ಮೈಸೂರು ಜಿಪಿಐಇಆರ್ ರಂಗ ತಂಡದಿಂದ ‘ಸಿರಿ’, 28ರಂದು ಶಿವಮೊಗ್ಗ ಕಲಾಭಾರತಿ ತಂಡದಿಂದ ‘ಶ್ಮಶಾನ ಕುರುಕ್ಷೇತ್ರಂ’, 29ರಂದು ಬಳ್ಳಾರಿ ಕನ್ನಡ ಕಲಾಸಂಘದಿಂದ ‘ಆಧೇ ಅಧೂರೇ’, ಡಿ.1ರಂದು ಬೆಂಗಳೂರು ಡ್ರಾಮಾಟ್ರಿಕ್ಸ್‌ನಿಂದ ‘ಅರಳಿದ ಗಜಲುಗಳು’, 2ರಂದು ಕೊಡವೂರು ನವಸುಮ ರಂಗಮಂಚದಿಂದ ‘ಅಗ್ನಿ ಮತ್ತು ಮಳೆ’, 3ರಂದು ಬೆಂಗಳೂರು ದೃಶ್ಯ ಕಾವ್ಯ ತಂಡದಿಂದ ‘ಸೂರ್ಯಾಸ್ತದಿಂದ ಸೂರ್ಯೋದಯವರೆಗೆ’, 4ರಂದು ಕೊಡವೂರು ಸುಮನಸಾದಿಂದ ‘ಮುದ್ರಾ ರಾಕ್ಷಸ’ ಮತ್ತು 5ರಂದು ಸಾಗರ ಸ್ಪಂದನ ತಂಡದಿಂದ ‘ಆಷಾಢದ ಒಂದು ದಿನ’ ನಾಟಕಗಳು ಪ್ರದರ್ಶನಗೊಳ್ಳಲಿವೆೆ.

 ಪ್ರತಿದಿನ ಸಂಜೆ 6:30ಕ್ಕೆ ನಾಟಕ ಪ್ರದರ್ಶನ ನಡೆಯಲಿದ್ದು, ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ 25 ಸಾವಿರ, 15 ಸಾವಿರ, 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಗರಿಷ್ಠ 10 ಸಾವಿರ ರೂ. ಪ್ರಯಾಣ ವೆಚ್ಚ, ಉಚಿತ ಊಟ, ವಸತಿ, ಸುವರ್ಣ ಸಂಭ್ರಮದ ಪ್ರಯುಕ್ತ 5 ಸಾವಿರ ರೂ. ಗೌರವಧನ ನೀಡಲಾಗುವುದು. ಶ್ರೇಷ್ಠ ನಾಟಕ, ನಿರ್ದೇಶನ, ನಟ, ನಟಿ, ಸಂಗೀತ, ಬೆಳಕಿನ ವಿನ್ಯಾಸ, ಪ್ರಸಾಧನ, ರಂಗಪರಿಕರ, ಬಾಲನಟನೆ, ಹಾಸ್ಯ ವಿಭಾಗಗಳಿಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರವಿರಾಜ್ ಎಚ್.ಪಿ., ಡಾ.ಅರವಿಂದ ನಾಯಕ್ ಅಮ್ಮುಂಜೆ, ಮೇಟಿ ಮುದಿಯಪ್ಪ, ನಂದಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News