ಜ್ಯುವೆಲ್ಲರಿ ದರೋಡೆ ಪ್ರಕರಣ: ಇಬ್ಬರ ಬಂಧನ

Update: 2016-11-21 18:36 GMT

 ಕಾಸರಗೋಡು, ನ.21: ಕುಂಡಗುಯಿಯ ಸುಮಂಗಲಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಾಸರಗೋಡು  ಪನ್ನಿಪ್ಪಾರೆಯ ಮುಕ್ಕಾನ್ ಶರೀಫ್(38) ಮತ್ತು ಉತ್ತರ ಪ್ರದೇಶ ಧನ್‌ಪುರದ ನಾಥೂರಾಮ್(35) ಎಂದು ಗುರುತಿಸಲಾಗಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ನಾಲ್ವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅ.4ರಂದು ದರೋಡೆ ನಡೆದ ಈ ಘಟನೆಯಲ್ಲಿ ವಿದ್ಯುತ್ ಕಟ್ಟರ್ ಬಳಸಿ ಶಟರ್ ಮತ್ತು ಲಾಕರ್ ತುಂಡರಿಸಿ ಜ್ಯುವೆಲ್ಲರಿ ಯಿಂದ ಅರ್ಧ ಕೆ.ಜಿ. ಚಿನ್ನಾಭರಣ, ಬೆಳ್ಳಿ ಕಳವು ಮಾಡಲಾಗಿತ್ತು ಎನ್ನಲಾಗಿದೆ. ಕೃತ್ಯದ ಸೂತ್ರಧಾರರು ಉತ್ತರ ಪ್ರದೇಶ ನಿವಾಸಿಗಳು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.

  ಜಿಲ್ಲಾ ಚಿನ್ನಾಭರಣ ಮಳಿಗೆ ವರ್ತಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಅಶೋಕ್ ಮಾಲಕತ್ವದ ಜ್ಯುವೆಲ್ಲರಿಯಿಂದ ಕಳವು ಮಾಡಲಾಗಿತ್ತು.

    ಒಂದು ಲಾಕರನ್ನು ಒಡೆದು ಚಿನ್ನಾಭರಣ ಮಾತ್ರ ದರೋಡೆ ಮಾಡಲಾಗಿತ್ತು. ಈ ಸಂದರ್ಭ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪು ತೆರಳಿದ್ದರಿಂದ ಇನ್ನೊಂದು ಲಾಕರ್ ಚಿನ್ನಾಭರಣ ದರೋಡೆ ವಿಫಲಗೊಂಡಿತ್ತು ಎಂದು ತಿಳಿದು ಬಂದಿದೆ.

    ಶರೀಫ್ ವಾಹನ ಕಳವು ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಎರಡು ಕಾಲ್ಗೆಜ್ಜೆ ಹಾಗೂ ಎರಡು ಬಳೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News