ಚೆರ್ವತ್ತೂರು ಬ್ಯಾಂಕ್ ದರೋಡೆ ಪ್ರಕರಣ: ಇಂದು ತೀರ್ಪು ಪ್ರಕಟ

Update: 2016-11-21 18:42 GMT

 ಕಾಸರಗೋಡು, ನ.21: ಚೆರ್ವತ್ತೂರಿನ ವಿಜಯ ಬ್ಯಾಂಕ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣದ ತೀರ್ಪನ್ನು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ನ.22ರಂದು ಬೆಳಗ್ಗೆ 11ಕ್ಕೆ ನೀಡಲಿದೆ.

ಪ್ರಕರಣದಲ್ಲಿ ಬಂಧಿತರಾದ 6 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಲಾಗಿತ್ತು. 2015ರ ಸೆ.26 ಮತ್ತು 27ರ ಮಧ್ಯೆ ಈ ದರೋಡೆ ನಡೆದಿತ್ತು. ಕಟ್ಟಡದ ಕೆಲ ಅಂತಸ್ತಿನ ಸೀಲಿಂಗ್‌ನಿಂದ ರಂಧ್ರ ಕೊರೆದು ಒಳನುಗ್ಗಿದ್ದ ಕಳ್ಳರು ಬ್ಯಾಂಕ್‌ನ ಭದ್ರತಾ ಕೊಠಡಿಗೆ ನುಗ್ಗಿ ಸುಮಾರು 4.75 ಕೋ.ರೂ. ಮೌಲ್ಯದ 20.40 ಕೆ.ಜಿ. ಚಿನ್ನಾಭರಣ ಮತ್ತು 4.95 ಲಕ್ಷ ರೂ. ನಗದನ್ನು ದರೋಡೆ ಮಾಡಿದ್ದರು. 28ರಂದು ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ತಲುಪಿದಾಗ ಕೃತ್ಯ ಬೆಳಕಿಗೆ ಬಂದಿತ್ತು.

ಪ್ರಕರಣದಲ್ಲಿ ಮಡಿಕೇರಿ ಕುಶಾಲನಗರದ ಎಸ್.ಸುಲೈಮಾನ್, ಕಾಸರಗೆಡು ಸಂತೋಷ್ ನಗರದ ಅಬ್ದುಲ್ಲತೀಫ್, ಎಂ.ಪಿ. ಮುಬಾಶೀರ್, ಚೆಂಗಳ ನಾಲ್ಕನೆ ಮೈಲ್‌ನ ಬೇರ್ಕದ ಅಶ್ರಫ್, ಇಡುಕ್ಕಿಯ ಮುರಳಿ, ಸುಳ್ಯ ಾಂತಿನಗರದ ಅಶ್ರಫ್ ಮತ್ತು ಮಡಿಕೇರಿಯ   ಅಬ್ದುಲ್ ಖಾದರ್ ಆರೋಪಿಗಳಾದ್ದಾರೆ.

  ಕಳವು ಗೈದಿದ್ದ ಚಿನ್ನಾಭರಣವನ್ನು ಚೆರ್ಕಳ ಬಳಿಯ ನಿರ್ಜನ ಪ್ರದೇಶದ ಪಾಳುಬಾವಿ ಮತ್ತು ಜನವಾಸ ಇಲ್ಲದ ಮನೆಯ ಅಟ್ಟದಲ್ಲಿ ದರೋಡೆಕೋರರು ಬಚ್ಚಿಟ್ಟಿದ್ದರು. ವ್ಯಾಪಾರ ಮಳಿಗೆ ಆರಂಭಿಸಲೆಂದು ನಕಲಿ ವಿಳಾಸ ನೀಡಿ ಪಡೆದಿದ್ದ ದರೋಡೆಕೋರರು ಇದೆ ರೂಮ್‌ನ ಮೇಲ್ಗಡೆ ಇದ್ದ ಬ್ಯಾಂಕ್‌ಗೆ ರಂಧ್ರ ಕೊರೆದು ಒಳನುಗ್ಗಿ ದರೋಡೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಶ್ರೀನಿವಾಸ್ ನೇತೃತ್ವದ ವಿಶೇಷ ತನಿಖಾ ತಂಡ 1 ವಾರದ ಅವಧಿಯಲ್ಲಿ ದರೋಡೆಕೋರರನ್ನು ಬಂಧಿಸಿತ್ತು. ಪ್ರಕರಣದಲ್ಲಿ 130 ಮಂದಿ ಸಾಕ್ಷಿಗಳನ್ನು ವಿಚಾರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News