×
Ad

ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಉದ್ಘಾಟನೆ

Update: 2016-11-23 21:31 IST

ಉಡುಪಿ, ನ.23: ಶಾಸ್ತ್ರೀಯ ಕಲೆ, ಸಂಗೀತ ಕಲಾವಿದರಿಗೆ ಸಿಗುವ ಗೌರವ ಮನ್ನಣೆಯು ರಂಗಭೂಮಿ ಕಲಾವಿದರುಗಳಿಗೆ ಸಿಗುತ್ತಿಲ್ಲ ಎಂದು ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಖೇದ ವ್ಯಕ್ತಪಡಿಸಿದ್ದಾರೆ.

ಉಡುಪಿ ರಂಗಭೂಮಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ನಡೆದ 37ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಶಾಸ್ತ್ರೀಯ ಕಲಾವಿದರುಗಳಿಗೆ ಲಕ್ಷಾಂತರ ರೂ. ನೀಡುವ ಸಂಘಟಕರು ರಂಗಭೂಮಿ ಕಲಾವಿದರುಗಳಿಗೆ ಹಣ ನೀಡುವಾಗ ಚೌಕಾಸಿ ಮಾಡುತ್ತಾರೆ. ಶಾಸ್ತ್ರೀಯ ಕಲಾವಿದರುಗಳಿಗೆ ಐಷರಾಮಿ ಹೊಟೇಲ್‌ಗಳಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದರೆ, ನಾಟಕ ಕಲಾವಿದರು ಹಾಲ್‌ನಲ್ಲಿಯೇ ದಿನ ಕಳೆಯುವ ಸ್ಥಿತಿ ಇಂದೂ ಇದೆ. ನಾಟಕ ಕಲಾವಿದರುಗಳಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಂದರೂ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಅವರು ಹೇಳಿದರು.

ಬೀದಿಗಿಳಿದು ಪ್ರತಿಭಟಿಸುವ ಹೋರಾಟಗಾರರಿಗಿಂತ ಹೆಚ್ಚಾಗಿ ಕನ್ನಡ ಭಾಷೆಯನ್ನು ಕಟ್ಟುವ ಕಾರ್ಯವನ್ನು ರಂಗಭೂಮಿ ಮಾಡುತ್ತಿದೆ. ಸಮಾಜ ದಲ್ಲಿನ ಓರೆಕೋರೆಗಳನ್ನು ತಿದ್ದುವ ಈ ಕಲೆಯು ಪೇಕ್ಷಕರ ಕೊರತೆಯನ್ನು ಎದುರಿಸುತ್ತಿರುವುದು ಕಟು ಸತ್ಯ ಎಂದು ಅವರು ತಿಳಿಸಿದರು.

ಸ್ಪರ್ಧೆಯನ್ನು ಉದ್ಘಾಟಿಸಿದ ಉದ್ಯಮಿ ಗೋಪಾಲ ಸಿ.ಬಂಗೇರ ಮಾತನಾಡಿ, ಅತ್ಯಂತ ವಿಶಿಷ್ಟವಾದ ರಂಗಭೂಮಿ ಕಲೆಯು ಎಲ್ಲ ಕಲೆಗಳನ್ನು ಒಳಗೊಂಡ ಸಾರ್ವಭೌಮ ಕಲೆಯಾಗಿದೆ. ಸಮಾಜದಲ್ಲಿನ ಓರೆಕೋರೆ ಗಳನ್ನು ತಿದ್ದುವ ಅತ್ಯಂತ ಮಹತ್ವದ ಮಾಧ್ಯಮವಾಗಿ ಮೂಡಿಬರುತ್ತಿದೆ ಎಂದು ಹೇಳಿದರು.

ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್, ಸುವರ್ಣ ಸಂಭ್ರಮದ ಕಾರ್ಯಾಧ್ಯಕ್ಷರಾದ ಯು.ಉಪೇಂದ್ರ, ಡಾ.ಅರವಿಂದ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು. ರಂಗಭೂಮಿ ಉಪಾಧ್ಯಕ್ಷ ವಾಸುದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಬ್ರಹ್ಮಣ್ಯ ಕುಸುಮ ಸಾರಂಗ ತಂಡದಿಂದ ‘ಸಂಸಾರದಲ್ಲಿ ಸನಿದಪ’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News