ಹಸಿರು ಪೀಠದ ವಿಚಾರಣೆ ಡಿ.7ಕ್ಕೆ ಮುಂದೂಡಿಕೆ
ಉಡುಪಿ, ನ.23: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ವಿಧಿಸಿರುವ ತಡೆಯಾಜ್ಞೆಗೆ ಸಂಬಂಧಿಸಿದಂತೆ ಚೆನ್ನೈ ಹಸಿರುಪೀಠದಲ್ಲಿ ವಿಚಾರಣೆ ಇಂದು ಮುಂದುವರಿದಿದ್ದು, ಮುಂದಿನ ವಿಚಾರಣೆಯನ್ನು ಡಿ.7ಕ್ಕೆ ನಿಗದಿ ಪಡಿಸಲಾಗಿದೆ.
ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸದಂತೆ ಚೆನ್ನೈ ಹಸಿರು ಪೀಠ ವಿಧಿಸಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ರಾಜ್ಯ ಸರಕಾರದ ಪರವಾಗಿ ದೇವರಾಜ್ ಅಶೋಕ್ ಬುಧವಾರ ಎರಡು ಗಂಟೆಗಳ ಕಾಲ ಸುದೀರ್ಘವಾದ ಗಂಭೀರ ವಾದವನ್ನು ಪೀಠದ ಮುಂದೆ ಮಂಡಿಸಿದ್ದು, ಕೋರ್ಟ್ ಸಮಯ ಮುಗಿದ ಕಾರಣ ಮುಂದಿನ ವಾದಕ್ಕೆ ಡಿ.7ರ ದಿನ ನಿಗದಿ ಪಡಿಸಿ ನ್ಯಾಯಾಧೀಶರು ಕಲಾಪವನ್ನು ಮುಂದೂಡಿದರು.
ಮರಳುಗಾರಿಕೆಗೆ ಸಂಬಂಧಿಸಿದಂತೆ ಸುರತ್ಕಲ್ ಎನ್‌ಐಟಿಕೆ ನಿವೃತ್ತ ಪ್ರಾಧ್ಯಾಪಕ, ತಜ್ಞರಾದ ಪ್ರೊ.ಎಸ್.ಜಿ.ಮಯ್ಯ ಮತ್ತು ವೆಂಕಟ ರೆಡ್ಡಿಯವರ ವರದಿಯ ಮೂಲ ಪ್ರತಿಯನ್ನು ಹಸಿರುಪೀಠಕ್ಕೆ ಸಲ್ಲಿಸಲಾಗಿದ್ದು, ನ್ಯಾಯಾಲಯ ಅದನ್ನು ಸ್ವೀಕರಿಸಿದೆ. ಡಿ.7ರ ವಿಚಾರಣೆಯ ವೇಳೆ ವಾದಗಳು ಪೂರ್ಣಗೊಂಡು ಮುಂದಿನ ದಿನದಲ್ಲಿ ತೀರ್ಪು ಪ್ರಕಟವಾಗಬಹುದೆನ್ನುವ ನಿರೀಕ್ಷೆಯನ್ನು ಹೊಯ್ಗೆ ಸಂಘ ಇರಿಸಿಕೊಂಡಿದೆ. ಉಡುಪಿ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಮೆಂಡನ್, ಸಂಘದ ವಕೀಲ ಶಿವರಾಜ್ ಹೆಗ್ಡೆ ಕುಂದಾಪುರ, ಅರ್ಜಿದಾರ ಉದಯ ಸುವರ್ಣ ಪರವಾಗಿ ವಕೀಲ ರಂಜನ್ ಶೆಟ್ಟಿ ಇಂದು ವಿಚಾರಣೆ ವೇಳೆ ಉಪಸ್ಥಿತರಿದ್ದರು.
ಅಕ್ರಮ ಮರಳುಗಾರಿಕೆಯಿಂದ ತಾಲೂಕಿನ ಬೈಕಾಡಿ, ಹಾರಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಜನತೆಗೆ ಉಂಟಾದ ಅನೇಕ ಬಗೆಯ ಸಮಸ್ಯೆಗಳಿಗೆ ಸರಕಾರ, ಇಲಾಖೆಗಳಿಂದ ಯಾವುದೇ ಪರಿಹಾರ ಸಿಗದಾಗ ಬೈಕಾಡಿಯ ಉದಯ ಸುವರ್ಣ ನೇತೃತ್ವದಲ್ಲಿ ಗ್ರಾಮಸ್ಥರು ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು, ಕಳೆದ ಮೇ17ರಿಂದ ಹಸಿರು ಪೀಠ ಮರಳುಗಾರಿಕೆಗೆ ತಡೆಯಾಜ್ಞೆ ವಿಧಿಸಿತ್ತು.