ಮಲ್ಪೆ ಬೀಚ್, ಮಣ್ಣಪಳ್ಳಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

Update: 2016-11-24 11:20 GMT

ಉಡುಪಿ, ನ.24: ನೋಟು ರದ್ಧತಿಯ ಬಿಸಿ ಈಗ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೂ ತಟ್ಟಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಲ್ಪೆ ಬೀಚ್‌ಗೆ ಶೇ.50ರಷ್ಟು ಹಾಗೂ ಮಣಿಪಾಲದ ಮಣ್ಣಪಳ್ಳದಲ್ಲಿರುವ ಬೋಟು ವಿಹಾರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.80ರಷ್ಟು ಇಳಿಮುಖವಾಗಿದೆ.

ನೋಟು ರದ್ದಾದ ಮೊದಲ ವಾರದಲ್ಲಿ ಮಲ್ಪೆ ಬೀಚ್‌ಗೆ ಬರುವ ಪ್ರವಾಸಿ ಗರ ಸಂಖ್ಯೆಯಲ್ಲಿ ಶೇ.35ರಷ್ಟು ಕಡಿಮೆಯಾಗಿದ್ದು, ಇದೀಗ ಅರ್ಧಕ್ಕೆ ಅರ್ಧ ಜನ ಬರುವುದು ನಿಂತಿದೆ. ಅದೇ ರೀತಿ ವಿದೇಶಿಯರ ಸಂಖ್ಯೆಯೂ ಈಗ ತೀರಾ ಇಳಿಮುಖ ಕಂಡಿದೆ. ಇದರಿಂದ ಮಲ್ಪೆ ಬೀಚ್‌ನಲ್ಲಿ ನಡೆಯುತ್ತಿರುವ ಜಲ ಕ್ರೀಡೆ ಹಾಗೂ ವ್ಯವಹಾರಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

ಇದಕ್ಕೆ ನಗದು ಚಲಾವಣೆ ಆಗದಿರುವುದು ಮುಖ್ಯ ಕಾರಣವಾದರೆ, ಅದೇ ರೀತಿ ಹಣದ ಕೊರತೆ ಹಾಗೂ ದಿನಕ್ಕೆ 2000ರೂ. ಮಾತ್ರ ಹಣ ತೆಗೆಯುವ ಮಿತಿಯಿಂದಾಗಿ ತೊಂದರೆಯಾಗಿದೆ. ಹೀಗಾಗಿ ಪ್ರವಾಸಿಗರು ವಿಹಾರಗಳಿಗೆ ತೆರಳುವುದಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಸಣ್ಣ ಕುಟುಂಬಗಳು ಬೆರಳಣಿಕೆ ಸಂಖ್ಯೆಯಲ್ಲಿ ಬೀಚ್‌ಗಳತ್ತ ಬರುತ್ತಿರುವುದನ್ನು ಕಾಣಬಹುದು. ಆದರೆ ತಂಡೋಪತಂಡವಾಗಿ ಬರುವುದು ಸಾಕಷ್ಟು ಕಡಿಮೆ ಆಗಿದೆ.

'ಜನರ ಕೈಯಲ್ಲಿ ಹಣ ಚಲಾವಣೆ ಆಗದೆ ಇರುವುದರಿಂದ ಬೀಚ್‌ಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಸದ್ಯಕ್ಕೆ ಬೀಚ್‌ನಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳು ನಡೆಯದೆ ಇರುವುದು ಕೂಡ ಇದಕ್ಕೆ ಕಾರಣ ಇರಬಹುದು ಎಂದು ಅನ್ನಿಸುತ್ತದೆ. ಮುಂದೆ ಡಿಸೆಂಬರ್ ರಜೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆ ಇದೆ' ಎನ್ನುತ್ತಾರೆ ಮಲ್ಪೆ ಬೀಚ್ ನಿರ್ವಹಣೆ ವಹಿಸಿಕೊಂಡಿರುವ ಸುದೇಶ್ ಶೆಟ್ಟಿ.

ಮಣಿಪಾಲದ ಮಣ್ಣಪಳ್ಳದಲ್ಲಿ ಜುಲೈ ತಿಂಗಳಲ್ಲಿ ಆರಂಭಗೊಂಡ ಬೋಟು ವಿಹಾರ ಈಗ ನೋಟು ರದ್ಧತಿಯ ಪರಿಣಾಮವನ್ನು ಎದುರಿಸುತ್ತಿದೆ. ಪ್ರವಾಸಿಗರು ಇತ್ತ ಬಾರದೆ ಇರುವುದರಿಂದ ಬೋಟುಗಳು ದಡದಲ್ಲೇ ಉಳಿದುಕೊಳ್ಳುವಂತಾಗಿದೆ.

ಬೋಟು ವಿಹಾರ ಆರಂಭಗೊಂಡ ಮೊದಲು ಮೂರು ತಿಂಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಈಗ ಹಣದ ಕೊರತೆ ಹಾಗೂ ಚಿಲ್ಲರೆ ಸಮಸ್ಯೆಯಿಂದ ವಿದ್ಯಾರ್ಥಿಗಳು ಇತ್ತ ಕಾಲಿಡುತ್ತಿಲ್ಲ. ಮೊದಲು ದಿನಕ್ಕೆ 100 ಜನ ಬರುತ್ತಿದ್ದ ವಿಹಾರಿಗಳ ಸಂಖ್ಯೆ ಈಗ 20ಕ್ಕೆ ಇಳಿಮುಖವಾಗಿದೆ.

'ಇಲ್ಲಿ ಹೆಚ್ಚಾಗಿ ಮಣಿಪಾಲದ ವಿದ್ಯಾರ್ಥಿಗಳೇ ಇಲ್ಲಿ ಬೋಟು ವಿಹಾರ ನಡೆಸುತ್ತಿದ್ದರು. ಆದರೆ ಈಗ 2000ರೂ. ಚಿಲ್ಲರೆ ಸಮಸ್ಯೆಯಿಂದ ಅವರ ಸಂಖ್ಯೆ ಕಡಿಮೆಯಾಗಿದೆ. ಒಂದು ಗಂಟೆ ಬೋಟು ವಿಹಾರಕ್ಕೆ ಒಬ್ಬರಿಗೆ 100 ರೂ. ಪಡೆದುಕೊಳ್ಳಲಾಗುತ್ತದೆ. ಇಬ್ಬರಿಗೆ 200ರೂ. ಆಗುತ್ತದೆ. ಅವರು ಕೊಡುವ 2000ರೂ. ನೋಟಿಗೆ 1800ರೂ. ನೀಡಲು ನಮ್ಮಲ್ಲಿ ಚಿಲ್ಲರೆ ಇಲ್ಲ. ಹೀಗಾಗಿ ನಾವು ಅವರಲ್ಲಿ ಮೊದಲೇ ವಿಚಾರಿಸಿ ಬೋಟು ಹತ್ತಿಸುತ್ತಿ ದ್ದೇವೆ. ಆದರೆ ಈಗ ಅವರೆಲ್ಲ ಬರುತ್ತಿಲ್ಲ' ಎಂದು ಬೋಟು ವಿಹಾರದ ನಿರ್ವಹಣೆ ವಹಿಸಿಕೊಂಡಿರುವ ನಾಗರಾಜ್ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News