×
Ad

ಸ್ವಾಯತ್ತತೆಗೆ ಧಕ್ಕೆ ; ನಳಂದ ವಿವಿ ಕುಲಪತಿ ರಾಜೀನಾಮೆ

Update: 2016-11-25 12:33 IST

ಹೊಸದಿಲ್ಲಿ, ನ.25: ನಳಂದ ವಿಶ್ವವಿದ್ಯಾನಿಲಯದ ಕುಲಪತಿ ಜಾರ್ಜ್ ಯಿಯೊ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ವಿಶ್ವವಿದ್ಯಾಲಯಕ್ಕೆ ಸ್ವಾಯತ್ತತೆ ನೀಡುವುದಾಗಿ ಹಿಂದೆ ಆಶ್ವಾಸನೆ ನೀಡಲಾಗಿದ್ದರೂ ಹಾಗೆ ಮಾಡದೇ ಇರುವುದೇ ತಮ್ಮ ಈ ನಿರ್ಧಾರಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.

ತನ್ನನ್ನು ಕುಲಪತಿ ಹುದ್ದೆ ವಹಿಸಿಕೊಳ್ಳಲು ಆಹ್ವಾನಿಸಿದಾಗ ವಿಶ್ವವಿದ್ಯಾನಿಲಯಕ್ಕೆ ಸ್ವಾಯತ್ತತೆ ನೀಡಲಾಗುವುದೆಂದು ಸತತವಾಗಿ ಆಶ್ವಾಸನೆ ನೀಡಲಾಗಿತ್ತು. ‘‘ಆದರೆ ಈಗ ಸ್ವಾಯತ್ತತೆಯ ಸುಳಿವೇ ಇಲ್ಲ’’ ಎಂದು ಅವರು ಹೇಳಿದ್ದಾರೆ. ಕಾಕತಾಳೀಯವಾಗಿ ವಿಶ್ವವಿದ್ಯಾನಿಲಯದ ಸ್ಥಾಪನಾ ದಿನದಂದೇ ಯಿಯೋ ಅವರ ರಾಜೀನಾಮೆ ಬಂದಿದೆ.
ಈಗಿನ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸ ಮಂಡಳಿಯನ್ನು ರಚಿಸುವಂತೆ ವಿಶ್ವವಿದ್ಯಾನಿಲಯದ ವಿಸಿಟರ್ ಅವರು ನೀಡಿದ ಆದೇಶ ತನಗೆ ಹಾಗೂ ಹಾಲಿ ಆಡಳಿತ ಮಂಡಳಿಯ ಇತರರಿಗೆ ಆಶ್ಚರ್ಯ ತಂದಿದೆ ಎಂದು ಅವರು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ .
ಇದಕ್ಕೂ ಮುಂಚೆ ನವೆಂಬರ್ 23ರಂದು ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರು ಈ ವಿಶ್ವವಿದ್ಯಾನಿಲಯದೊಂದಿಗೆ ತಮಗಿದ್ದ ಒಂಬ ತ್ತು ವರ್ಷಗಳ ನಂಟನ್ನು ಕಳಚಿಕೊಂಡಿದ್ದರು. ಅವರು ಮೊದಲು ಈ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರೆ, ನಂತರ ಆಡಳಿತ ಮಂಡಳಿಯ ಸದಸ್ಯರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದ್ದ ಸೇನ್ ಅವರು ಕುಲಪತಿ ಹುದ್ದೆಯನ್ನು ಫೆಬ್ರವರಿ 2015 ರಲ್ಲಿ ತೊರೆದಿದ್ದರಲ್ಲದೆ ಅಧಿಕಾರ ತ್ಯಜಿಸಿದ ನಂತರ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ವಿರುದ್ಧವೂ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಆದರೆ ನಂತರ ಆಡಳಿತ ಮಂಡಳಿ ಸದಸ್ಯರಾಗಿ ಮುಂದುವರಿದಿದ್ದ, ಅವರು ಇದೀಗ ವಿಶ್ವವಿದ್ಯಾನಿಲಯದೊಂದಿಗಿನ ಎಲ್ಲಾ ಸಂಬಂಧವನ್ನೂ ಕಡಿದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News