ನೋಟುಗಳ ಕೊರತೆ ಇನ್ನೂ 4-5 ತಿಂಗಳು ಮುಂದುವರಿಯಲಿದೆ:ಬಿಇಎಫ್‌ಐ
Update: 2016-11-25 14:30 IST
ಕೋಲ್ಕತಾ,ನ.25: ದೇಶದ ಎಲ್ಲ ಕರೆನ್ಸಿ ಮುದ್ರಣ ಘಟಕಗಳು ಗರಿಷ್ಠ ಸಾಮರ್ಥ್ಯ ದೊಂದಿಗೆ ಕಾರ್ಯಾಚರಿಸಿದರೂ ನೋಟುಗಳ ಕೊರತೆ ಇನ್ನೂ 4-5 ತಿಂಗಳುಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ) ತಿಳಿಸಿದೆ.
ಮುಂದಿನ ವಾರ ವೇತನ ಸ್ವೀಕಾರ ಮತ್ತು ವೇತನದ ಹಣವನ್ನು ಬ್ಯಾಂಕುಗಳಿಂದ ಹಿಂಪಡೆಯುವುದು ಕಠಿಣವಾಗಲಿದ್ದು, ನೋಟುಗಳ ಕೊರತೆ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಲಿದೆ ಎಂದು ಬಿಇಎಫ್‌ಐ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಿಸ್ವಾಸ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈ ವರ್ಷದ ಮಾರ್ಚ್‌ನಲ್ಲಿ ಹಳೆಯ 500 ರೂ.ಗಳ 15,707 ಮಿಲಿಯನ್ ಮತ್ತು 1.000 ರೂ.ಗಳ 6,326 ಮಿಲಿಯನ್ ನೋಟುಗಳು ಚಲಾವಣೆಯಲ್ಲಿದ್ದವು ಎಂದ ಅವರು, ಮುಂದಿನ ವಾರ ಗ್ರಾಹಕರು ತಮ್ಮ ವೇತನಗಳನ್ನು ಬ್ಯಾಂಕುಗಳು ಮತ್ತು ಎಟಿಎಂಗಳಿಂದ ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದರು.