×
Ad

ನೋಟು ನಿಷೇಧ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಡಿ.2ಕ್ಕೆ ಮುಂದೂಡಿಕೆ

Update: 2016-11-25 14:33 IST

ಹೊಸದಿಲ್ಲಿ,ನ.25: ನೋಟು ನಿಷೇಧ ಕುರಿತ ಎಲ್ಲ ಅರ್ಜಿಗಳ ವಿಚಾರಣೆಯನ್ನು ತಾನು ಡಿ.2ರಂದು ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಇಂದು ಪ್ರಕಟಿಸುವು ದರೊಂದಿಗೆ, ನ್ಯಾಯಾಲಯದ ಕೆಂಗಣ್ಣಿನಿಂದ ಸದ್ಯಕ್ಕೆ ಪಾರಾಗಿರುವ ಕೇಂದ್ರ ಸರಕಾರವು ಇನ್ನೊಂದು ವಾರ ನೆಮ್ಮದಿಯಿಂದ ಇರಬಹುದಾಗಿದೆ.

 ನೋಟು ನಿಷೇಧವನ್ನು ಪ್ರಶ್ನಿಸಿ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿರುವ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಅಥವಾ ಯಾವುದಾದರೂ ಒಂದೇ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೇಂದ್ರವು ಸಲ್ಲಿಸಿರುವ ಅರ್ಜಿಯೂ ಇವುಗಳಲ್ಲಿ ಸೇರಿದೆ.

ಜನರು ಎದುರಿಸುತ್ತಿರುವ ತೊಂದರೆಗಳು ಮತ್ತು ನೋಟು ನಿಷೇಧದ ನ.8ರ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನೂ ತಾನು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.

ನೋಟು ನಿಷೇಧವನ್ನು ಪ್ರಶ್ನಿಸಿರುವ ಅರ್ಜಿದಾರರ ಪರ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, 500 ಮತ್ತು 1,000 ರೂ.ನೋಟುಗಳನ್ನು ನಿಷೇಧಿಸಿರುವ ತನ್ನ ನಿರ್ಧಾರ ಕುರಿತಂತೆ ಕೇಂದ್ರದ ಮೇಲಿನ ಒತ್ತಡವನ್ನು ಕಾಯ್ದುಕೊಳ್ಳುವಂತೆ ನ್ಯಾಯಾಲಯವನ್ನು ಆಗ್ರಹಿಸಿದರು.

ನೋಟು ನಿಷೇಧ ಕ್ರಮವು ಸಂವಿಧಾನ ವಿರೋಧಿಯಾಗಿದೆ ಮತ್ತು ಜನಸಾಮಾನ್ಯರು, ರೈತರು ಹಾಗೂ ವ್ಯಾಪಾರಿಗಳನ್ನು ಸಂಕಷ್ಟದಲ್ಲಿ ತಳ್ಳಿದೆ ಎಂದು ಹೇಳಿದ ಅವರು, ಕೈಯಲ್ಲಿ ಹಣವಿಲ್ಲದೆ ಜನರು ಬೀದಿಗಳಲ್ಲಿ ಉಪವಾಸ ಬಿದ್ದಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News