ನಕ್ಸಲ್ ದಾಳಿ ಭೀತಿ: ಕೇರಳದ ಐದು ಜಿಲ್ಲೆಗಳಲ್ಲಿ ತೀವ್ರ ನಿಗಾ
ಕಾಸರಗೋಡು, ನ.25: ಮಲಪ್ಪುರಂ ಜಿಲ್ಲೆಯ ನಿಲಂಬೂರ್ ರಕ್ಷಿತಾರಣ್ಯದಲ್ಲಿ ಇಬ್ಬರು ನಕ್ಸಲರ ಎನ್‌ಕೌಂಟರ್‌ಗೆ ಪ್ರತೀಕಾರವಾಗಿ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಗಾ ವಹಿಸಲು ರಾಜ್ಯ ಗೃಹ ಸಚಿವಾಲಯ ಆದೇಶ ನೀಡಿದೆ.
ನಕ್ಸಲರ ಹತ್ಯೆಗೆ ಪ್ರತಿಕಾರಕ್ಕೆ ಸಂಚು ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಆದೂರು, ಬದಿಯಡ್ಕ, ಪಾಣತ್ತೂರು, ವೆಳ್ಳರಿಕುಂಡು, ಚಿತ್ತಾರಿಕ್ಕಲ್ ಮತ್ತು ಚೀಮೇನಿ ಠಾಣೆಗಳ ಬಗ್ಗೆ ಮೇಲೆ ನಕ್ಸಲರು ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಸಂದೇಶ ನೀಡಲಾಗಿದೆ.
ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಆದೇಶ ನೀಡಲಾಗಿದೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಈ ಠಾಣೆಗಳಿರುವುದರಿಂದ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಸಿಸಿಟಿವಿಗಳನ್ನು ಅಳವಡಿಸುವಂತೆಯೂ ಪೊಲೀಸ್ ಇಲಾಖೆ ನಿರ್ದೇಶ ನೀಡಿದೆ. ಈ ಪೊಲೀಸ್ ಠಾಣೆಗಳಿಗೆ ಅತ್ಯಾಧುನಿಕ ಬಂದೂಕುಗಳನ್ನು ಒದಗಿಸಲಾಗಿದೆ.