×
Ad

ಚರ್ಚೆಯಲ್ಲಿ ಜೆಎನ್‌ಯು ವಿದ್ಯಾರ್ಥಿಗೆ ತಿರುಗೇಟು ನೀಡಿದ ಕೇಂದ್ರ ಸಚಿವೆ ನಿರ್ಮಲಾ

Update: 2016-11-25 16:17 IST

ಹೊಸದಿಲ್ಲಿ,ನ.25 : ಕೇಂದ್ರದ ನರೇಂದ್ರ ಮೋದಿ ಸರಕಾರದಲ್ಲಿ ವಾಣಿಜ್ಯ,ಉದ್ಯೋಗ, ಹಣಕಾಸುಹಾಗೂ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಖಾಸಗಿ ಚಾನೆಲ್ ಒಂದು ನೋಟು ಅಮಾನ್ಯ ಕುರಿತು ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಜೆ ಎನ್ ಯು ವಿದ್ಯಾರ್ಥಿಯೊಬ್ಬನಿಗೆ ಖಡಕ್ ಜವಾಬ್ ಮೂಲಕ ತಿರುಗೇಟು ನೀಡಿದ್ದಾರೆ.

ಬ್ಯಾಂಕ್ ಖಾತೆ ಯಾ ಪೇಟಿಎಂ ಇಲ್ಲದ ತರಕಾರಿ ಮಾರಾಟಗಾರರು ಹಾಗೂ ಹಾಲು ಮಾರಾಟಗಾರರಿಗೆ ಸರಕಾರ ನೋಟು ರದ್ದತಿಯ ಮೂಲಕ ಶಿಕ್ಷೆ ನೀಡುತ್ತಿದೆಯೇ ಎಂದು ಹಿರಿಯ ಬಿಜೆಪಿ ನಾಯಕಿಯೂ ಆಗಿರುವ ಸೀತಾರಾಮನ್ ಅವರನ್ನು ಎನ್ ಡಿ ಟಿ ವಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಜೆ ಎನ್ ಯು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದ. 500 ಹಾಗೂ 1000 ರೂ. ನೋಟುಗಳನ್ನುರದ್ದುಗೊಳಿಸಿದ ನಂತರ ಸರಕಾರ 2000 ರೂ. ಹೊಸ ನೋಟುಗಳನ್ನು ಚಲಾವಣೆಗೆ ತಂದಿರುವುದು ತಪ್ಪಲ್ಲವೇ ಎಂದೂ ಆತ ಕೇಳಿದ್ದ. ತಾನು ಬಡವರ ಹಾಗೂ ಅಸಂಘಟಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪರವಾಗಿ ಈ ಪ್ರಶ್ನೆಗಳನ್ನು ಸಚಿವೆಗೆ ಕೇಳುತ್ತಿರುವುದಾಗಿಯೂ ಆತ ತಿಳಿಸಿದ್ದ.

ಸಚಿವೆ ಆ ವಿದ್ಯಾರ್ಥಿಯ ಪ್ರಶ್ನೆಗಳಿಗೆ ಉತ್ತರ ನೀಡಲು ಆರಂಭಿಸುತ್ತಿದ್ದಂತೆಯೇ ಆತ ಅವರ ಮಾತುಗಳನ್ನು ತುಂಡರಿಸುವ ಪ್ರಯತ್ನ ಮಾಡುತ್ತಲೇ ಇದ್ದ.ಹೆಚ್ಚಿನ ಸಂಸದರು ವಂಚಿತ ವರ್ಗಗಳಿಗೆ ಸೇರಿದವರು ಎಂದು ಸಚಿವೆ ಹೇಳಿದಾಗ ವಿದ್ಯಾರ್ಥಿ ‘‘ಅವರು ವಂಚಿತ ವರ್ಗಗಳ ಸಾಂಕೇತಿಕ ಪ್ರತಿನಿಧಿಗಳು,’’ ಎಂದು ಪ್ರತಿಕ್ರಿಯಿಸಿದ. ಇದರಿಂದ ಸಿಟ್ಟುಗೊಂಡ ನಿರ್ಮಲಾ ಸೀತಾರಾಮನ್ ‘‘ನೀವು ಭಾರತದ ಮತದಾರರ ಅವಗಣನೆ ಮಾಡುತ್ತಿಲ್ಲವೇನು ?’’ ಎಂದು ಪ್ರಶ್ನಿಸಿದರು. ತಮ್ಮ ಮಾತು ಮುಂದುವರಿಸಿದ ಸೀತಾರಾಮನ್ ಸಂಸತ್ತಿನಲ್ಲಿ ಬಿಜೆಪಿ ಹಾಗೂ ಇತರ ಎಲ್ಲಾ ಪಕ್ಷಗಳಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರತಿನಿಧಿಗಳಿದ್ದಾರೆಂದು ಹೇಳುತ್ತಲೇ ಮತ್ತೆ ಅವರ ಮಾತನ್ನು ಅರ್ಧದಲ್ಲಿಯೇ ತುಂಡರಿಸಿದ ವಿದ್ಯಾರ್ಥಿ ‘‘ಇದು ಕೇವಲ ಪ್ರಚಾರ ಮಾತ್ರ,’’ ಎಂದು ಹೇಳಿದ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಸೀತಾರಾಮನ್ ‘‘ನೀವು ಮೀಸಲಾತಿ, ಸಂವಿಧಾನವನ್ನೂ ಕೇವಲ ಪ್ರಚಾರ (ಪ್ರೊಪಗಾಂಡ) ಎಂದು ಹೇಳುತ್ತಿದ್ದೀರಿ’’ ಎಂದರು. ಇದಾದ ನಂತರ ಇಬ್ಬರ ನಡುವೆ ವ್ಯಾಗ್ಯುದ್ಧವೇ ನಡೆದು ಹೋಯಿತು.

ಆ ವಿದ್ಯಾರ್ಥಿ ತನ್ನ ಆಕ್ಷೇಪವನ್ನು ವ್ಯಕ್ತಪಡಿಸುವುದನ್ನು ಮುಂದುವರಿಸುತ್ತಲೇ ಹೋದಾಗ ಸಚಿವೆ ‘‘ನಿಮ್ಮ ಮಾತು ಮಹತ್ವಪೂರ್ಣವಾದರೂ ನೀವು ಇತರರಿಗೂ ಮಾತನಾಡಲು ಅವಕಾಶ ಮಾಡಿಕೊಡಬೇಕು’’ ಎಂದು ಹೇಳಿದರು. ‘‘ನೀವು ನನಗೆ ಮಾತನಾಡಲು ಬಿಡುತ್ತಿಲ್ಲ. ಆಗಾಗ ಮೈಕ್ ಕೈಗೆತ್ತಿಕೊಂಡು ಮಾತನಾಡುತ್ತಾ ನನಗೆ ಏನೂ ಗೊತ್ತಿಲ್ಲ, ಎಲ್ಲವೂ ನಿಮಗೇ ಗೊತ್ತಿರುವುದು ಎಂಬರ್ಥದಲ್ಲಿ ಮಾತನಾಡುತ್ತಿದ್ದೀರಿ, ಎಂದರು.

‘‘ಜೆ ಎನ್ ಯು ವಿನಂತಹ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಹೊರತಾಗಿಯೂ ಅವರ ಈ ವರ್ತನೆಯಿಂದ ನನಗೆ ಆಶ್ಚರ್ಯವಾಗಿದೆ’’ ಎಂದು ಸಚಿವೆ ಹೇಳಿದರು. ತಾನು ಕೂಡ ಜೆ ಎನ್ ಯು ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಕಲಿತವಳು ಎಂದ ಸಚಿವೆ ಮುಂದೆ ಪ್ರಧಾನಿಯ ಆ್ಯಪ್ ಸಮೀಕ್ಷೆಯ ಫಲಿತಾಂಶದ ಬಗ್ಗೆ ವ್ಯಕ್ತವಾದ ಸಂದೇಹಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ‘‘ನಿಮಗೆ ಸಂದೇಹವಿದ್ದರೆ ನೀವು ಹೋಗಿ ಜನರ ಬಳಿ ಮಾತನಾಡಿ ಅವರು ಸರಕಾರದ ನಿರ್ಧಾರದಿಂದ ಸಂತುಷ್ಟರಾಗಿದ್ದಾರೆ,’’ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News