ಕಂಬಳ ನಿಷೇಧ ತೆರವಿಗೆ ರಾಜ್ಯ ಸರಕಾರದಿಂದ ಪ್ರಯತ್ನ: ಪ್ರಮೋದ್

Update: 2016-11-25 11:46 GMT

ಉಡುಪಿ, ನ.25: ತುಳುನಾಡಿನ ಜನಪ್ರಿಯ ಜನಪದ ಕ್ರೀಡೆ ಕಂಬಳವನ್ನು ನಡೆಸದಂತೆ ರಾಜ್ಯ ಹೈಕೋರ್ಟ್ ನಿರ್ಬಂಧ ವಿಧಿಸಿದ್ದು, ಈ ಬಗ್ಗೆಪಶು ವೈದ್ಯಕೀಯ ತಜ್ಞರು ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಕಂಬಳ ಕ್ರೀಡೆಯ ಕುರಿತಂತೆ ಕರಾವಳಿ ಭಾಗದ ಜನರ ಭಾವನೆಗಳನ್ನು ಗಮನ ದಲ್ಲಿರಿಸಿಕೊಂಡು ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ಸಮರ್ಥವಾಗಿ ವಾದ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದಿರುವ ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಕಾರ್ಕಳ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸುತ್ತಿದ್ದರು.

ಕಂಬಳ ಕರಾವಳಿ ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಕಂಬಳ ಕ್ರೀಡೆಯನ್ನು ಕೆಸರು ಮಣ್ಣಿನಿಂದ ಕೂಡಿದ ಭತ್ತ ಬೆಳೆಯುವ ವಿಶಾಲವಾದ ಗದ್ದೆಗಳಲ್ಲಿ ಆಯೋಜಿಸಲಾಗುತ್ತಿದೆ. ತುಳುನಾಡಿನ ಜನರ ಹಲವು ಆರಾಧನಾತ್ಮಕ ಹಾಗೂ ಆಚರಣಾತ್ಮಕ ನಂಬಿಕೆಗಳ ಅಂಶಗಳನ್ನು ಇದು ಒಳಗೊಂಡಿದೆ ಎಂದು ಪ್ರಮೋದ್ ತಿಳಿಸಿದರು.

ಕೋಣಗಳ ದೈಹಿಕ ರಚನೆ ಕಂಬಳದ ಓಟಕ್ಕೆ ಪೂರಕವಾಗಿಲ್ಲ ಎಂಬ ವಾದದ ಆಧಾರದಲ್ಲಿ ಕಂಬಳವನ್ನು ನಿಷೇಧಿಸಲು ಕೆಲವು ಪ್ರಾಣಿದಯಾ ಸಂಘಗಳು ಬೇಡಿಕೆ ಇಟ್ಟಿದ್ದು, ನ್ಯಾಯಾಲಯ ಪ್ರಕರಣಗಳ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ನೀಡಲು ಸರಕಾರವು ಬೀದರ್‌ನ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಹಾಗೂ ಮೀನುಗಾರಿಕಾ ವಿವಿಯ ಪರಿಣಿತರ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2015ರ ಫೆ.15ರಂದು ಕಾರ್ಕಳದ ಮಿಯಾರು ಕಂಬಳಕ್ಕೆ ಭೇಟಿ ನೀಡಿ, ನೀಡಿದ ವರದಿಯ ಹಿನ್ನೆಲೆಯಲ್ಲಿ ಅಹಿಂಸಾತ್ಮಕವಾಗಿ ಕಂಬಳವನ್ನು ಆಯೋಜಿಸುವ ಷರತ್ತಿಗೊಳಪಟ್ಟು ಕಂಬಳವನ್ನು ಆಯೋಜಿಸಲು ಅನುಮತಿಯನ್ನು ನೀಡಲಾಗಿತ್ತು.

ಇದೀಗ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ ಸಂಸ್ಥೆಯು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದು, ವಿಚಾರಣೆಯ ಬಳಿಕ ನ್ಯಾಯಾಲಯವು ಈ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಕಂಬಳ ಕ್ರೀಡೆಯನ್ನು ಆಯೋಜಿಸಬಾರದು ಎಂದು ನ.22ರಂದು ತಡೆಯಾಜ್ಞೆ ನೀಡಿದೆ ಎಂದು ಪ್ರಮೋದ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News