ಎನ್ನೆಸ್ಸೆಸ್: ಮೈಸೂರು ವಿವಿಗೆ ರಾಷ್ಟ್ರದ ಅಗ್ರಪ್ರಶಸ್ತಿ

Update: 2016-11-25 12:01 GMT

ಉಡುಪಿ, ನ.25: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಮೈಸೂರು ವಿಶ್ವವಿದ್ಯಾಲಯ 2015-16ನೇ ಸಾಲಿನಲ್ಲಿ ರಾಷ್ಟ್ರಕ್ಕೆ ಅಗ್ರಪ್ರಶಸ್ತಿಯನ್ನು ಗೆದ್ದು ಕೊಂಡಿದೆ ಎಂದು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೈಸೂರು ವಿವಿಯ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಸಂಯೋಜನಾಧಿಕಾರಿ ಡಾ.ಕಾಳಚನ್ನೇಗೌಡರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಇಂದಿರಾಗಾಂಧಿ ಎನ್ನೆಸ್ಸೆಸ್ ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಎನ್ನೆಸ್ಸೆಸ್ ಯೋಜನಾಧಿಕಾರಿ ಮಹದೇವ ಎನ್. ತಲವಾರ್ ಅವರು ಶ್ರೇಷ್ಠ ಯೋಜನಾಧಿಕಾರಿ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.

ದೇಶದ 400ಕ್ಕೂ ಅಧಿಕ ವಿವಿಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅನುಷ್ಠಾನದಲ್ಲಿದ್ದು, ಮೈಸೂರು ವಿವಿ ಮೂಲಕ ಕರ್ನಾಟಕ ರಾಜ್ಯ ಪ್ರಥಮ ಸ್ಥಾನ ಪಡೆದಿರುವುದು ನಮ್ಮ ರಾಜ್ಯಕ್ಕೊಂದು ಹೆಮ್ಮೆಯ ವಿಷಯ. ಇದು ಕರ್ನಾಟಕದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ರಚನಾತ್ಮಕ ಅನುಷ್ಠಾನಕ್ಕೆ ಸಂದ ಗೌರವವಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News