ಉಬರಡ್ಕದಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ
ಸುಳ್ಯ, ನ.25: ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆಯು ಸುಳ್ಯ ಎಸ್ಸೈ ಚಂದ್ರಶೇಖರ್ ನೇತೃತ್ವದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಉಬರಡ್ಕ, ಉಪಾಧ್ಯಕ್ಷೆ ಶೈಲಜಾ, ಸದಸ್ಯರಾದ ಹರಿಪ್ರಸಾದ್ ಪಾನತ್ತಿಲ, ಕೇಶವ ಕಕ್ಕೆಬೆಟ್ಟು, ಮಮತ ಕುದ್ಪಾಜೆ, ಗೀತಾ ಕುತ್ತಮೊಟ್ಟೆ, ಪಿಡಿಒ ಗುರುಪ್ರಸಾದ್ ವೇದಿಕೆಯಲ್ಲಿದ್ದರು. ಸುಳ್ಯದಲ್ಲಿ ನಡೆದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಜನಾರ್ದನ ನಾಯ್ಕ ಎಂಬವರು ನೀಡಿದ ದೂರು ಸತ್ಯವಲ್ಲ. ಅವರ ಜಮೀನು ಸಮಸ್ಯೆ ಕೂಡಾ ಕುಟುಂಬದ ಒಳಗಿನ ವ್ಯವಹಾರ ಎಂದು ಸೀತಾನಂದ ಬೇರ್ಪಡ್ಕ ಹೇಳಿದರು. ಇದನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿ ಎಂದು ಎಸ್ಸೈ ಹೇಳಿದರು.
ಮನೆ ಮಂಜೂರಾಗಿದ್ದರೂ ನಿವೇಶನವನ್ನು ಸ್ಥಳೀಯರೊಬ್ಬರು ವಶಕ್ಕೆ ಪಡೆದಿರುವುದರಿಂದ ಸಮಸ್ಯೆಯಾಗಿದೆ ಎಂದು ಚೋಮ ಎಂಬವರು ದೂರಿದರು. ಮಾಧವ ಗೌಡ ಹಾಗೂ ಚೋಮರ ಮಧ್ಯೆ ಜಮೀನು ವಿವಾದವಿದ್ದು, ಅದನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿ ಎಂದು ಹರೀಶ್ ಉಬರಡ್ಕ ಸಲಹೆ ಮಾಡಿದರು. ಪಾನತ್ತಿಲ ಕಾಲನಿಯವರಿಗೆ ಸ್ಮಶಾನದ ಸಮಸ್ಯೆ ಇದೆ. ಸ್ಮಶಾನ ಇದ್ದರೂ ಮಧ್ಯದಲ್ಲಿ ಕಂದಡ್ಕ ಹೊಳೆ ಹರಿಯುವುದರಿಂದ ಮಳೆಗಾಲದಲ್ಲಿ ಸುತ್ತು ಬಳಸಿ ಬರಬೇಕು ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಮಾಣಿಬೆಟ್ಟು ಕಾಲನಿಗೆ ಹೋಗುವ ರಸ್ತೆ ಇಸಾಕ್ ಸಾಹೇಬ್ ಎಂಬವರ ಜಮೀನಿನ ಮೂಲಕ ಹೋಗುತ್ತಿದೆ. ಪಂಚಾಯತ್‌ನಿಂದ ರಸ್ತೆ ದುರಸ್ತಿಗೆ 30 ಸಾವಿರ ಅನುದಾನವೂ ಇದೆ. ಆದರೆ ಇಲ್ಲಿ ಎರಡು ರಬ್ಬರ್ ಮರ ರಸ್ತೆಗೆ ಅಡ್ಡವಾಗಿದೆ. ಎರಡೆರಡು ಬಾರಿ ಮನವಿ ಮಾಡಿದ್ದೇವೆ. ಪಂಚಾಯತ್ ವತಿಯಿಂದ ಮನವಿ ಮಾಡಬೇಕು ಎಂದು ಸೀತಾನಂದ ಬೇರ್ಪಡ್ಕ ಆಗ್ರಹಸಿದರು. ಗ್ರಾಮದ ಶೇಖರ ಎಂಬವರ ಅಟೋರಿಕ್ಷಾ ಕಳವಾಗಿದೆ. ಹುಡುಕುವ ಯತ್ನ ಮಾಡಬೇಕೆಂದು ಹರೀಶ್ ಉಬರಡ್ಕ ಮನವಿ ಮಾಡಿದರು.
ಕೊಳವೆ ಬಾವಿ ಕೊರೆಸುವ ನಿರ್ಬಂಧದ ಕುರಿತು ಸಬೆಯಲ್ಲಿ ಚರ್ಚೆ ನಡೆಯಿತು. ಕಳೆದ ವರ್ಷ ಬೇಸಿಗೆಯಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಹತ್ತಿರದ ಮನೆಗಳಿಗೆ ನೀರು ನೀಡಲಾಗಿದೆ. ಆ ಷರತ್ತಿನಲ್ಲಿ ಅನುಮತಿ ನೀಡಬಹುದು ಎಂದು ಸೀತಾನಂದ ಬೇರ್ಪಡ್ಕ ಸಲಹೆ ನೀಡಿದರು. ಕೊಳವೆ ಬಾವಿ ನಿಬರ್ಂಧಿಸಿರುವುದು ಸರಕಾರದ ತೀರ್ಮಾನ. ಇದನ್ನು ಬದಲಿಸಲು ಕಷ್ಟ. ಹಾಗಿದ್ದೂ ಶಾಸಕರ ಮೂಲಕ ಯತ್ನಿಸುವುದಾಗಿ ಹರೀಶ್ ಉಬರಡ್ಕ ಉತ್ತರಿಸಿದರು.
ಜಾಲ್ಸೂರು ಗ್ರಾಮಕ್ಕೆ ಹೊಸದಾಗಿ ಪೊಲೀಸ್ ಹೊರಠಾಣೆ ಮಂಜೂರಾಗಿದ್ದು, ಮುಂದಿನ ವರ್ಷದ ಕೊನೆಯ ಒಳಗೆ ಕಾರ್ಯಾರಂಭ ಮಾಡಲಿದೆ ಎಂದು ಎಸ್ಸೈ ಚಂದ್ರಶೇಖರ್ ಹೇಳಿದ್ದಾರೆ.
ಉಬರಡ್ಕದಲ್ಲಿ ನಡೆದ ಎಸ್ಸಿಎಸ್ಟಿ ಕುಂದು ಕೊರತೆ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸುಮಾರು 8 ಗ್ರಾಮಗಳನ್ನು ಸೇರಿಸಿ ಅಲ್ಲೊಂದು ಹೊರಠಾಣೆ ಅಗತ್ಯವಿದೆ ಎಂದು ಸರಕಾರಕ್ಕೆ ಮನವಿ ಹೋಗಿತ್ತು. ಈ ಕುರಿತು ಪರಿಶೀಲನೆ ನಡೆಸಲಾಗಿದ್ದು, ಹೊರಠಾಣೆ ಮಂಜೂರಾಗಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದವರು ಹೇಳಿದರು. ಪ್ರತಿಯೊಂದು ಗ್ರಾಮಕ್ಕೂ ಒಬ್ಬೊಬ್ಬ ಪೊಲೀಸ್ ಬೀಟ್ ಸಿಬ್ಬಂದಿ ನಿಯೋಜಿಸಲಾಗಿದೆ. ಆ ಗ್ರಾಮದವರು ಏನೇ ಘಟನೆಗಳು ಆದರೂ ಬೀಟ್ ಸಿಬ್ಬಂದಿಯ ಗಮನಕ್ಕೆ ತರಬೇಕು. ಆ ಬಳಿಕ ತನ್ನ ಗಮನಕ್ಕೆ ತಂದರೆ ಸಾಕು. ಆ ಗ್ರಾಮಕ್ಕೆ ಅವರೇ ಎಸ್ಸೈ ಇದ್ದ ಹಾಗೆ. ಉಬರಡ್ಕ ಗ್ರಾಮಕ್ಕೆ ಮಹೇಶ್ ಎಂಬ ಬೀಟ್ ಸಿಬ್ಬಂದಿ ನೇಮಿಸಲಾಗಿದೆ ಎಂದು ಚಂದ್ರಶೇಖರ್ ಹೇಳಿದರು.
ಪ್ರತಿ ಗ್ರಾಮದಲ್ಲೂ ಕೋವಿ ತಪಾಸಣೆ ಹಾಗೂ ಬಳಕೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ. ಆಯಾ ಗ್ರಾಮದವರಿಗೆ ಮುಂಚಿತವಾಗಿ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಅವರು ತಿಳಿಸಿದರು. ಜಾಲ್ಸೂರು ಗ್ರಾಮದ ಕೋನಡ್ಕ ಪದವು ಬೋರ್ ಪ್ರಕರಣ ಸಭೆಯಲ್ಲಿ ಚರ್ಚೆಗೆ ಬಂತು. ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯೆ ಗುಲಾಬಿ ಮಾತನಾಡಿ, ಮೊನ್ನೆಯ ಘಟನೆ ಪತ್ರಿಕೆಗಳಲ್ಲಿ ಬಂದ ಬಳಿಕ ರಾತ್ರಿ ತನ್ನ ಮನೆಗೆ ಬೋರ್ ಲಾರಿಯವರು ಬಂದು ಪ್ರಶ್ನಿಸಿದ್ದಾರೆ ಎಂದವರು ಸಭೆಯ ಗಮನಕ್ಕೆ ತಂದರು. ಅಕ್ರಮ ಕೊಳವೆ ಬಾವಿ ಕೊರೆಸುವ ಕುರಿತು ಸಕ್ಷಮ ಪ್ರಾಧಿಕಾರದಿಂದ ದೂರು ಬಂದರೆ ಮಾತ್ರ ಅದು ಕೋರ್ಟ್‌ನಲ್ಲಿ ನಿಲ್ಲುತ್ತದೆ. ಹಾಗಾಗಿ ಗ್ರಾಮ ಪಂಚಾಯತ್ ಮೂಲಕವೇ ಲಿಖಿತವಾಗಿ ದೂರು ನೀಡಿ ಎಂದು ಎಸ್ಸೈ ಸಲಹೆ ನೀಡಿದರು.
ಕೋನಡ್ಕ ಪದವಿನಲ್ಲಿ 300 ಮನೆಗಳಿವೆ ಅಲ್ಲಿಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲ ಎಂದು ಗುಲಾಬಿ ದೂರಿದರು. ಅಲ್ಲಿ ಕೊರೆಸಬೇಕಾದ ಬೋರ್‌ನ್ನು ನದಿ ತಟದಲ್ಲಿ ಕೊರೆಸಲಗಿದೆ ಎಂದವರು ದೂರಿದರು. ಉದ್ಯೋಗ ಖಾತರಿಯಲ್ಲಿ ತೆಗೆದ ಬಾವಿಗೆ ಸಾಕಷ್ಟು ಅನುದಾನ ಬರುತ್ತದೆ. ಕೊಳವೆ ಬಾವಿಗಿಂತ ತೆರೆದ ಬಾವಿ ತೋಡುವುದು ಒಳ್ಳೆಯದು ಎಂದು ಹರೀಶ್ ಉಬರಡ್ಕ ಸಲಹೆ ನೀಡಿದರು.