ಶಾಲಾ ಮುಖ್ಯಶಿಕ್ಷಕಿಯಿಂದ ಅಸ್ಪಶ್ಯತೆ ಆಚರಣೆ ಆರೋಪ: ಪೋಷಕರ ದೂರು
ಸುಳ್ಯ, ನ.25: ಶಾಲಾ ಮಕ್ಕಳನ್ನು ಗೃಹ ಪ್ರವೇಶವೊಂದಕ್ಕೆ ಕರೆದೊಯ್ದ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಮಧ್ಯೆ ಅಸ್ಪಶ್ಯತೆ ಆಚರಣೆಗೆ ಕಾರಣರಾಗಿದ್ದಾರೆಂದು ಆರೋಪಿಸಿ ಪೋಷಕರು ಶಿಕ್ಷಣಾಧಿಕಾರಿಗೆ ದೂರು ನೀಡಿದ ಘಟನೆಯೊಂದು ನಡೆದಿದೆ.
ಕನಕಮಜಲು ಗ್ರಾಮದ ಮಣಿಮಜಲು ಮುಗೇರು ಕಿರಿಯ ಪ್ರಾಥಮಿಕ ಶಾಲೆಯ ಸಮೀಪ ಇರುವ ಮನೆಯೊಂದರ ಗೃಹಪ್ರವೇಶ ಕಾರ್ಯಕ್ರಮ ಗುರುವಾರ ನಡೆದಿತ್ತು. ಮನೆಯವರ ಆಹ್ವಾನದ ಮೇರೆಗೆ ಮಣಿಮಜಲು ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಹಾಗೂ ಸಹ ಶಿಕ್ಷಕರು ಗೃಹ ಪ್ರವೇಶಕ್ಕೆ ಕರೆದೊಯ್ದಿದ್ದರು. ಈ ವೇಳೆ 32 ಮಂದಿಯಲ್ಲಿ ಇದ್ದ 8 ಮಂದಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಮನೆಯೊಳಗೆ ಕರೆದೊಯ್ಯದೆ ಹೊರಗೆ ಅಂಗಳದಲ್ಲೇ ನಿಲ್ಲಲು ಮುಖ್ಯ ಶಿಕ್ಷಕಿ ಹೇಳಿದರೆಂದೂ ಅವರಿಗೆ ಪೂಜೆ ಪ್ರಸಾದವನ್ನು ಕೂಡ ಹೊರಗೆ ತಂದು ನೀಡಲಾಯಿತೆಂದೂ ಆರೋಪಗಳು ಕೇಳಿ ಬಂದಿವೆ.
ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಹೆತ್ತವರ ಬಳಿ ವಿಚಾರ ತಿಳಿಸಿದ್ದು, ಶಿಕ್ಷಣ ಇಲಾಖೆಗೆ ದೂರು ನೀಡಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಈ ಕುರಿತಂತೆ ವಿಚಾರಣೆ ನಡೆಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಧಿಕಾರಿಗಳು ವಿಚಾರಿಸಿದ್ದಾರೆಂದು ತಿಳಿದು ಬಂದಿದೆ. ಅಸ್ಪಶ್ಯತೆ ಆಚರಣೆಯ ಆರೋಪವನ್ನು ಮುಖ್ಯ ಶಿಕ್ಷಕಿ ನಿರಾಕರಿಸಿದ್ದಾರೆ.