ಎಂಆರ್‌ಪಿಎಲ್-ಸುರತ್ಕಲ್ ರಸ್ತೆ ಅವ್ಯವಸ್ಥೆ: ನ.30ರಂದು ಮೇಯರ್, ಶಾಸಕರು ರಾಜೀನಾಮೆಗೆ ಒತ್ತಾಯಿಸಿ ಮುತ್ತಿಗೆ

Update: 2016-11-25 13:13 GMT

ಮಂಗಳೂರು, ನ. 25: ಎಂಆರ್‌ಪಿಎಲ್-ಕಾನ-ಸುರತ್ಕಲ್ ರಸ್ತೆ ದುರಸ್ತಿಯನ್ನು ತಿಂಗಳೊಳಗೆ ಪೂರ್ತಿಗೊಳಿಸುವ ಸುಳ್ಳು ಭರವಸೆ ನೀಡಿ ಜನತೆಯನ್ನು ನಂಬಿಸಿರುವ ಮಂಗಳೂರು ಪಾಲಿಕೆ ಮೇಯರ್ ಹರಿನಾಥ್, ಸ್ಥಳೀಯ ಶಾಸಕ ಮೊಯ್ದಿನ್ ಬಾವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನವೆಂಬರ್ 30ರಂದು ಸುರತ್ಕಲ್‌ನಲ್ಲಿರುವ ಪಾಲಿಕೆ ಉಪಕಚೇರಿ ಮತ್ತು ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ಕಾನ-ಸುರತ್ಕಲ್ ಆಗ್ರಹಿಸಿದೆ.

ಈ ಬಗ್ಗೆ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಹಾಗೂ ಹೋರಾಟ ಸಮಿತಿಯ ಸಲಹೆಗಾರ ಮುನೀರ್ ಕಾಟಿಪಳ್ಳ, ಎಂಆರ್‌ಪಿಎಲ್-ಸುರತ್ಕಲ್ ರಸ್ತೆ ಬೃಹತ್ ಉದ್ದಿಮೆಗಳ ಘನ ವಾಹನಗಳ ಓಡಾಟದಿಂದ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ ಎಂದರು.

ಎಂಆರ್‌ಪಿಎಲ್, ಬಿಎಎಸ್‌ಎಫ್, ಎಚ್‌ಪಿಸಿಎಲ್ ಕಂಪೆನಿಗಳು ಈ ರಸ್ತೆಯನ್ನು ನಿಯಮಬಾರವಾಗಿ ಬಳಸುತ್ತಿರುವುದರಿಂದ ಸ್ತೆ ಹೀನಾಯ ಸ್ಥಿತಿಗೆ ತಲುಪಿದೆ. ಸಾರ್ವಜನಿಕರಿಗಿಂತ ಹೆಚ್ಚಾಗಿ ಈ ಕಂಪೆನಿಗಳ ವಾಹನಗಳೇ ಈ ರಸ್ತೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿರುವುದರಿಂದ ರಸ್ತೆಯು ಹೊಂಡಗುಂಡಿಗಳಿಂದ ಕೂಡಿದೆ. ಕಳೆದ ಎರಡು ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಸ್ಥಳೀಯ ನಾಗರಿಕರು ಹಲವು ಹಂತಗಳ ಹೋರಾಟ ನಡೆಸುತ್ತಿದ್ದರೂ, ನಗರಪಾಲಿಕೆ, ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ಕಳೆದ ಮೂರು ತಿಂಗಳಿನಿಂದ ಹೋರಾಟ ತೀವ್ರಗೊಂಡ ಸಂದರ್ಭ ಎಚ್ಚೆತ್ತ ನಗರಪಾಲಿಕೆ ಮೇಯರ್ ಹರಿನಾಥ್, ಶಾಸಕ ಮೊಯ್ದಿನ್ ಬಾವ, ಲೋಕ ಸಭಾ ಸದಸ್ಯ ನಳಿನ್‌ಕುಮಾರ್ ಕಟೀಲ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ, ಒಂದು ತಿಂಗಳೊಳಗಡೆ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಘೋಷಿಸಿದ್ದರು. ಅದರಂತೆ ಅಲ್ಪಾವಧಿ ಟೆಂಡರ್‌ಗೆ ಪಾಲಿಕೆ ಕೌನ್ಸಿಲ್‌ನಿಂದ ಅನುಮೋದನೆ ಪಡೆದಿದ್ದರು. ಈ ಮಧ್ಯೆ ಶಾಸಕ ಮೊಯ್ದಿನ್ ಬಾವ ಯಾವುದೇ ಟೆಂಡರ್ ಇಲ್ಲದೆ 1.5 ಕೋಟಿ ರೂ. ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಜನತೆಯನ್ನು ದಿಕ್ಕು ತಪ್ಪಿಸುವ ಯತ್ನಕ್ಕೆ ಕೈಹಾಕಿದ್ದರು. ಒಂದು ತಿಂಗಳೊಳಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದ ಶಾಸಕ ಮೊಯ್ದಿನ್ ಬಾವ, ಮೇಯರ್ ಹರಿನಾಥ್ ತಿಂಗಳು ಕಳೆದರೂ ಜನತೆಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಕಂಪೆನಿಗಳಿಂದ ರಸ್ತೆ ದುರಸ್ತಿಗೆ ಅನುದಾನ ಸಿಗದಿದ್ದಲ್ಲಿ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟನೆಯ ನೇತೃತ್ವ ವಸುಹಿವುದಾಗಿ ಹೇಳಿದ್ದ ಮೇಯರ್ ಹರಿನಾಥ್ ಈಗ ಸುರತ್ಕಲ್-ಕಾನ-ಎಂಆರ್‌ಪಿಎಲ್ ರಸ್ತೆಯನ್ನು ಮರೆತುಬಿಟ್ಟಿದ್ದಾರೆ. ಆದ್ದರಿಂದ ಮೇಯರ್ ಮತ್ತು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.

ನಾಗರಿಕ ಹೋರಾಟ ಸಮಿತಿಯು ಕಾನ-ಸುರತ್ಕಲ್ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ರಸ್ತೆ ದುರಸ್ತಿ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ಸುರತ್ಕಲ್ ಪಾಲಿಕೆ ಉಪಕಚೇರಿ ಮತ್ತು ಶಾಸಕ ಮೊಯ್ದಿನ್ ಬಾವರ ಕಚೇರಿಗೆ ನವೆಂಬರ್ 30ರಂದು ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಮುನೀರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಬಿ.ಕೆ ಇಮ್ತಿಯಾಝ್, ಸಹ ಸಂಚಾಲಕರಾದ ನವೀನ್ ಪೂಜಾರಿ, ಶ್ರೀನಾಥ್ ಕುಲಾಲ್, ಬೆನಡಿಕ್ಟ್ ಕ್ರಾಸ್ತಾ, ಮುಷ್ತಾಕ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News