ಗದ್ದೆಗಿಳಿದು ನೇಜಿ ನಾಟಿ ಮಾಡಿದ ವಿದ್ಯಾರ್ಥಿಗಳು
ಮೂಡುಬಿದಿರೆ, ನ.25: ಕಲ್ಲಬೆಟ್ಟು-ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಪ್ರೌಢಶಾಲೆಯ ಸುಮಾರು 75 ವಿದ್ಯಾರ್ಥಿಗಳು ಶುಕ್ರವಾರ ಸ್ವರಾಜ್ಯ ಮೈದಾನದ ಬಳಿಯಿರುವ ಕೆಸರುಗದ್ದೆಗಿಳಿದು ನೇಜಿ ನಾಟಿ ಹಾಗೂ ಆಟೋಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮೂಡುಬಿದಿರೆ ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಭತ್ತದ ಗದ್ದೆಯಲ್ಲಿ ಅಂತರ್ಜಲ ಹೆಚ್ಚುತ್ತದೆ. ಮನುಷ್ಯನಿಗೆ ಮಾತ್ರವಲ್ಲ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳಿಗೂ ಗದ್ದೆ ಜೀವನಾಧಾರವಾಗಿದೆ. ಕೃಷಿಯ ಕಸುಬು, ಗದ್ದೆಯ ವಾತಾವರಣದಿಂದಾಗಿ ರೋಗರುಜಿನಗಳಿಂದ ದೂರವಿರಬಹುದು. ಕೈಗಾರಿಕೆ ಹೆಚ್ಚಾಗುವುದು ಅಭಿವೃದ್ಧಿಯಲ್ಲ. ಕೃಷಿ, ಪರಿಸರ ಸಮೃದ್ಧವಾಗುವುದೇ ನಿಜವಾದ ಅಭಿವೃದ್ಧಿ. ನಗರ ಜೀವನದ ಜಂಜಾಟಕ್ಕೆ ಹಳ್ಳಿ ಜೀವನ, ಕೃಷಿಯಲ್ಲಿ ಮುಕ್ತಿಯಿದೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಎಕ್ಸಲೆಂಟ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಬೆದ್ರ ತುಳುಕೂಟದ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಪ್ರಗತಿಪರ ಕೃಷಿಕ ಪೌಸ್ತೀನ್ ಸಿಕ್ವೇರಾ, ಶಿಕ್ಷಕ ಪ್ರದೀಪ್ ಅಂಚನ್ ಉಪಸ್ಥಿತರಿದ್ದರು.