ಆಸ್ಟ್ರೇಲಿಯದಲ್ಲಿ 2 ಸೌರ ವಿದ್ಯುತ್ ಸ್ಥಾವರ ನಿರ್ಮಿಸಲಿರುವ ಅದಾನಿ

Update: 2016-11-25 14:56 GMT

ಸಿಡ್ನಿ (ಆಸ್ಟ್ರೇಲಿಯ), ನ. 25: ಭಾರತೀಯ ಇಂಧನ ಉದ್ಯಮ ದೈತ್ಯ ಅದಾನಿ ಸಮೂಹ ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ಎರಡು ನೂತನ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯವನ್ನು ಆರಂಭಿಸಲಿದೆ.

120ರಿಂದ 150 ಮೆಗಾವಾಟ್ ವಿದ್ಯುತ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವೊಂದನ್ನು ದಕ್ಷಿಣ ಆಸ್ಟ್ರೇಲಿಯದ ಉಕ್ಕಿನ ಪಟ್ಟಣ ವಯಾಲದಲ್ಲಿ ನಿರ್ಮಿಸಲಾಗುವುದು ಎಂಬುದಾಗಿ ಅದಾನಿ ಗುಂಪು ಶುಕ್ರವಾರ ತಿಳಿಸಿದೆ ಎಂದು ಕ್ಸಿನುವ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಕಂಪೆನಿಯು 100-200 ಮೆಗಾವಾಟ್ ಸಾಮರ್ಥ್ಯದ ಇನ್ನೊಂದು ಸೌರ ವಿದ್ಯುತ್ ಸ್ಥಾವರವನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿರುವ ಮಾಜಿ ಕಲ್ಲಿದ್ದಲು ಪಟ್ಟಣ ಮೊರಂಬಾದಲ್ಲಿ ನಿರ್ಮಿಸುವುದು.

‘‘ಸೌರ ವಿದ್ಯುತ್ ಉತ್ಪಾದನೆಗೆ ಪರಿಪೂರ್ಣ ಸ್ಥಳವಾಗಿ ವಯಾಲವನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ’’ ಎಂದು ವಯಾಲವನ್ನು ಒಳಗೊಂಡ ಗೈಲ್ಸ್ ಸಂಸದೀಯ ಕ್ಷೇತ್ರದ ಚುನಾಯಿತ ಪ್ರತಿನಿಧಿ ಎಡ್ಡೀ ಹ್ಯೂಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕ್ವೀನ್ಸ್‌ಲ್ಯಾಂಡ್ ರಾಜ್ಯದ ಗಲಿಲೀ ಜಲಾನಯನ ಪ್ರದೇಶದಲ್ಲಿ ಅದಾನಿ ಗುಂಪು ನಿರ್ಮಿಸುತ್ತಿರುವ 15.60 ಬಿಲಿಯ ಅಮೆರಿಕನ್ ಡಾಲರ್ (ಸುಮಾರು 1,06,837 ಕೋಟಿ ರೂಪಾಯಿ) ವೆಚ್ಚದ ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರ ಕಾನೂನಿನ ಸುಳಿಯಲ್ಲಿ ಸಿಲುಕಿಕೊಂಡಿರುವ ಸಮಯದಲ್ಲಿ, ನೂತನ ಯೋಜನೆಗಳು ಅದಾನಿ ಗುಂಪಿನ ಕೈಸೇರುತ್ತಿರುವುದು ಗಮನಾರ್ಹವಾಗಿದೆ.

ಕಲ್ಲಿದ್ದಲು ವಿದ್ಯುತ್ ಸ್ಥಾವರ ಪ್ರಕರಣದಲ್ಲಿ, ಅದಾನಿ ಸಮೂಹಕ್ಕೆ ಗಣಿಗಾರಿಕೆ ಪರವಾನಿಗೆ ನೀಡಿರುವುದನ್ನು ಪ್ರಶ್ನಿಸಿ ಪರಿಸರ ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯನ್ನು ಕ್ವೀನ್ಸ್‌ಲ್ಯಾಂಡ್ ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಪರಿಸರ ಸಂಬಂಧಿ ವ್ಯಾಜ್ಯಗಳ ಹಿನ್ನೆಲೆಯಲ್ಲಿ ಬೃಹತ್ ಕಲ್ಲಿದ್ದಲು ಯೋಜನೆ ಸದ್ಯಕ್ಕೆ ನನೆಗುದಿಗೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News