×
Ad

ಜನಧನ್ ಖಾತೆಗಳಲ್ಲಿನ ಠೇವಣಿ 64,250 ಕೋ.ರೂ.ಗೇರಿಕೆ

Update: 2016-11-25 23:22 IST

ಹೊಸದಿಲ್ಲಿ,ನ.25: ಜನಧನ್ ಖಾತೆಗಳಿಗೆ ಹರಿದು ಬಂದಿರುವ ಠೇವಣಿಗಳ ಮೊತ್ತ 64,252.15 ಕೋ.ರೂ.ಗಳಿಗೆ ಏರಿಕೆಯಾಗಿದೆ. 10,670.62 ಕೋ.ರೂ.ಗಳೊಂದಿಗೆ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಲ ಮತ್ತು ರಾಜಸ್ಥಾನ ನಂತರದ ಸ್ಥಾನಗಳಲ್ಲಿವೆ ಎಂದು ಸಹಾಯಕ ವಿತ್ತಸಚಿವ ಸಂತೋಷಕುಮಾರ ಗಂಗ್ವಾರ್ ಅವರು ಶುಕ್ರವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಜನಧನ್ ಖಾತೆಗಳಲ್ಲಿ ಶೂನ್ಯಶಿಲ್ಕನ್ನು ನಿವಾರಿಸಲು ಒಂದು ಅಥವಾ ಎರಡು ರೂ.ಜಮಾ ಮಾಡುವಂತೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ಅಧಿಕಾರಿಗಳಿಗೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ ಎಂದು ಅವರು ಒತ್ತಿ ಹೇಳಿದರು.
ನ.16ಕ್ಕೆ ಇದ್ದಂತೆ ದೇಶಾದ್ಯಂತ ಇರುವ 25.58 ಕೋಟಿ ಜನಧನ್ ಖಾತೆಗಳಲ್ಲಿ ಒಟ್ಟು 64,252.15 ಕೋ.ರೂ.ಠೇವಣಿಯಿದೆ. ಉ.ಪ್ರದೇಶದಲ್ಲಿ ಅತ್ಯಧಿಕ (3.79 ಕೋ.) ಜನಧನ್ ಖಾತೆಗಳಿದ್ದು, ಠೇವಣಿಗಳ ಮೊತ್ತ(10,670.62 ಕೋ.ರೂ.)ವೂ ಅತ್ಯಧಿಕವಿದೆ. 2.44 ಕೋ.ಖಾತೆಗಳು ಮತ್ತು 7,826.44 ಕೋ.ರೂ. ಠೇವಣಿಯೊಂದಿಗೆ ಪಶ್ಚಿಮ ಬಂಗಾಲ ಎರಡನೆ ಹಾಗೂ 1.89 ಕೋ.ಖಾತೆಗಳು ಮತ್ತು 5,345.57 ಕೋ.ರೂ. ಠೇವಣಿಯೊಂದಿಗೆ ರಾಜಸ್ಥಾನ ಮೂರನೇ ಸ್ಥಾನಗಳಲ್ಲಿವೆ ಎಂದರು.
ಒಟ್ಟು 25.58 ಕೋ.ಜನಧನ್ ಖಾತೆಗಳ ಪೈಕಿ 5.98 ಕೋ.(ಶೇ.23.02) ಶೂನ್ಯಶಿಲ್ಕಿನ ಖಾತೆಗಳಾಗಿವೆ ಎಂದರು.
 ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಹಾಯಕ ವಿತ್ತಸಚಿವ ಅರ್ಜುನ ರಾಮ ಮೇಘವಾಲ್ ಅವರು, ನ.11ಕ್ಕೆ ಇದ್ದಂತೆ 17.87 ಲ.ಕೋ.ರೂ.ಗಳ ನೋಟುಗಳು ಚಲಾವಣೆಯಲ್ಲಿದ್ದವು. ಹಿಂದಿನ ಹಣಕಾಸು ವರ್ಷದ 2,365.2 ಕೋ.ನೋಟುಗಳಿಗೆ ಹೋಲಿಸಿದರೆ ಆರ್‌ಬಿಐ 2015-16ನೆ ಸಾಲಿನಲ್ಲಿ 2,119.5 ಕೋ.ನೋಟುಗಳನ್ನು ಮುದ್ರಿಸಿದೆ ಎಂದು ತಿಳಿಸಿದರು.
2,000 ರೂ.ಮತ್ತು 500 ರೂ.ಗಳ ಹೊಸನೋಟುಗಳು ಈಗಾಗಲೇ ಚಲಾವಣೆಯಲ್ಲಿದ್ದು, ಕಾಲಕ್ರಮೇಣ ಇತರ ಮುಖಬೆಲೆಗಳ ಹೊಸನೋಟುಗಳೂ ಚಲಾವಣೆಗೆ ಬರಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News