ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನರೇಶ್ ಶೆಣೈ ಜಾಮೀನು ಅರ್ಜಿ ವಿಚಾರಣೆ

Update: 2016-11-26 15:46 GMT

ಮಂಗಳೂರು, ನ. 26: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬಾಳಿಗಾ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಹಾಕಿದ್ದ ಅರ್ಜಿಯ ವಿಚಾರಣೆಯು ಸೋಮವಾರ ನಡೆಯಲಿದೆ ಎಂದು ಹೈಕೋರ್ಟ್‌ನ ನ್ಯಾಯವಾದಿ ರವೀಂದ್ರ ಕಾಮತ್ ತಿಳಿಸಿದ್ದಾರೆ.

ಬಾಳಿಗಾ ಅವರ ನಿವಾಸದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ನರೇಶ್ ಶೆಣೈಯನ್ನು ಹೈಕೋರ್ಟ್ ಜಾಮೀನು ಮೇಲೆ ಬಿಡುಗಡೆಗೊಳಿಸಿದೆ. ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ಬಾಳಿಗಾ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯು ಸೋಮವಾರ ನಡೆಯಲಿದೆ ಎಂದರು.

 ನರೇಶ್ ಶೆಣೈಗೆ ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಬೇಕೆಂದು ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲವು ವಜಾಗೊಳಿಸಿದೆ. ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಬಯಲಾಗಬಹುದು. ಈ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಗೆ ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ಬಾಳಿಗಾ ಕುಟುಂಬಕ್ಕೆ ನ್ಯಾಯ ಸಿಗದಿದ್ದಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಕೋರಲಾಗುವುದು ಎಂದು ರವೀಂದ್ರ ಕಾಮತ್ ಹೇಳಿದರು.

ಮಂಪರು ಪರೀಕ್ಷೆಗೊಳಪಡಲು ಆತಂಕ ಯಾಕೆ

ಮಂಪರು ಪರೀಕ್ಷೆಗೆ ಒಳಪಡಲು ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈಗೆ ಹೆದರಿಕೆ ಯಾಕೆ ಎಂದು ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಪ್ರಶ್ನಿಸಿದ್ದಾರೆ.

ಆರೋಪಿಗೆ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ. ಆದ್ದರಿಂದ ಮಂಪರು ಪರೀಕ್ಷೆಗೆ ಸಮ್ಮತಿ ನೀಡುವಂತೆ ಕೋರಿ ಬಾಳಿಗಾ ಕುಟಂಬ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ. ತನ್ನನ್ನು ತಾನು ಅಮಾಯಕನೆಂದು ಹೇಳಿಕೊಳ್ಳುತ್ತಿರುವ ನರೇಶ್ ಶೆಣೈಗೆ ಮಂಪರು ಪರೀಕ್ಷೆಗೆ ಒಳಪಡಲು ಆತಂಕ ಯಾಕೆ ಎಂದವರು ಪ್ರಶ್ನಿಸಿದ್ದಾರೆ.

ವಿನಾಯಕ ಬಾಳಿಗಾ ಅವರು ವೆಂಕಟರಮಣ ದೇವಸ್ಥಾನ ಹಾಗೂ ಕಾಶಿ ಮಠಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಪ್ರಶ್ನಿಸಿದ್ದರು. ಈ ಕುರಿತು ಕಾಶಿಮಠದ ಈಗಿನ ಮುಖ್ಯಸ್ಥರಿಗೆ ಬಾಳಿಗಾ ಅವರು ಪತ್ರ ಬರೆದಿದ್ದರೆನ್ನಲಾಗಿದೆ. ಬಾಳಿಗಾ ಅವರು ಹತ್ಯೆಯಾಗುವ ಕೆಲವು ದಿನಗಳ ಮುಂಚೆ ಮಠದ ಮುಖ್ಯಸ್ಥರು ಬೀಡುಬಿಟ್ಟಿದ್ದ ದೆಹಲಿ ಕ್ಯಾಂಪ್‌ಗೆ ಪತ್ರವನ್ನು ಕಳುಹಿಸಿದ್ದರು. ವಿನಾಯಕ ಬಾಳಿಗಾ ಅವರು ಬರೆದ ಪತ್ರವನ್ನು ಹಾಜರುಪಡಿಸುವಂತೆ ಮಠದ ಈಗಿನ ಸ್ವಾಮೀಜಿಗೆ ಸಮನ್ಸ್ ಕಳುಹಿಸಿದಾಗ ಸ್ವಾಮೀಜಿಯವರೇ ಖುದ್ದಾಗಿ ಹಾಜರಾಗಬೇಕಿತ್ತು. ಆದರೆ ಅವರು ಮಠದ ಗುಮಾಸ್ತನನ್ನು ಹಾಗೂ ತಮ್ಮ ಪ್ರತಿನಿಧಿಯಾಗಿ ಇಬ್ಬರು ವಕೀಲರನ್ನು ಕಳುಹಿಸಿದ್ದರು ಎಂದರು.

ಸುದ್ದಿಗೋಷ್ಠಿಯಲ್ಲಿ ದೆಹಲಿ ಹೈಕೋರ್ಟ್‌ನ ವಕೀಲೆ ಲೀನಾ, ಕಾರ್ಪೊರೇಟರ್ ದಯಾನಂದ್, ದಸಂಸದ ಎಂ.ದೇವದಾಸ್, ಬಾಳಿಗಾ ಅವರ ತಂದೆ, ತಾಯಿ ಹಾಗೂ ಸಹೋದರಿಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News