ಡಿ.11, 12ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ 9ನೆ ಬ್ರಾಹ್ಮಣ ಮಹಾಸಮ್ಮೇಳನ

Update: 2016-11-26 18:27 GMT

ಮಂಗಳೂರು, ನ.26: ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಅಖಿಲ ಕರ್ನಾಟಕ ರಾಜ್ಯಮಟ್ಟದ 9ನೆ ಬ್ರಾಹ್ಮಣ ಮಹಾಸಮ್ಮೇಳನವನ್ನು ಡಿ.11ಮತ್ತು 12ರಂದು ಬೆಳಗಾವಿಯ ಅನಗೋಳ ಭಾಗ್ಯನಗರ ಗಾಯತ್ರಿ ಸಭಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಹಾಸಭಾದ ಉಪಾಧ್ಯಕ್ಷ ಎಲ್.ತಿಮ್ಮಪ್ಪ ಹೆಗ್ಡೆ, ಬೆಳಗಾವಿ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದ್ದು, ಸುಮಾರು 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
 ಸಮಾವೇಶದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಇತರ ಸಮುದಾಯವನ್ನು ಒಳಗೊಂಡಂತೆ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದವರು ಹೇಳಿದರು.
 ‘2012ರಲ್ಲಿ ಸರ್ವೇ ನಡೆಸಿ 36 ಲಕ್ಷ ಮಂದಿ ಬ್ರಾಹ್ಮಣ ಸಮುದಾಯದವರನ್ನು ಗುರುತಿಸಿದ್ದೇವೆ. ಇದರಲ್ಲಿ ಸಮುದಾಯದ ವಿವಿಧ ಪಂಗಡಗಳು ಸೇರಿವೆ. ಆದರೆ ಸರಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೇವಲ 12 ಲಕ್ಷ ಬ್ರಾಹ್ಮಣರಿದ್ದಾರೆ. ಸಮುದಾಯದವನ್ನು ಒಟ್ಟು ಸೇರಿಸಬೇಕಾದ ಆವಶ್ಯಕತೆಯ ನೆಲೆಯಲ್ಲಿ ಸಮ್ಮೇಳನ ಸಂಘಟಿಸಲಾಗುತ್ತಿದೆ’ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಎಂ.ಎಸ್.ನಂಜುಂಡ ಸ್ವಾಮಿ ತಿಳಿಸಿದ್ದಾರೆ.

ರಾಜ್ಯಸರಕಾರ ಆರಂಭಿಸಿರುವ ಸರ್ವೇ ಸಂದರ್ಭ ಪ್ರತಿಯೊಬ್ಬ ಬ್ರಾಹ್ಮಣ ಸಮುದಾಯದ ಮಂದಿ 200ನೆ ಕಾಲಂನಲ್ಲಿ ಬ್ರಾಹ್ಮಣ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಗ ಸಮುದಾಯದ ಸಂಖ್ಯೆ ಗುರುತಿಸಲು ಸುಲಭವಾಗುತ್ತದೆ. ರಾಜ್ಯದಲ್ಲಿ 18 ಒಳಪಂಗಡಗಳಿದ್ದು, ಹೆಚ್ಚಿನವರು ಇದರಿಂದಲೇ ಗುರುತಿಸಿಕೊಳ್ಳುವುದರಿಂದ ಒಟ್ಟು ಸಂಖ್ಯೆ ಪಡೆಯುವಲ್ಲಿ ತೊಡಕಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾದ ದ.ಕ. ಜಿಲ್ಲಾಧ್ಯಕ್ಷ ಎಂ.ಆರ್.ವಾಸುದೇವ, ಪ್ರಮುಖರಾದ ಹರಿಕೃಷ್ಣ ಪುನರೂರು, ಸುಬ್ರಹ್ಮಣ್ಯ ಶಾಸಿ, ಎಸ್.ಪ್ರದೀಪ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News