ಉಳ್ಳಾಲ: ಯುವ ಕಾಂಗ್ರೆಸ್ ಸಮಾವೇಶದಲ್ಲಿ ‘ಜನ ಸೇರಿಲ್ಲ’ ಎಂಬ ಪ್ರಚಾರದ ವಾಸ್ತವವೇನು?
ಮಂಗಳೂರು, ನ.26: ನೋಟು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಶನಿವಾರ ಉಳ್ಳಾಲದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿತ್ತು. ಆದರೆ ಈ ‘ಸಮಾವೇಶದಲ್ಲಿ ಜನರೇ ಸೇರಿಲ್ಲ’, ‘ನೋಟು ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಗೆ ಜನಬೆಂಬಲ ಸಿಗುತ್ತಿಲ್ಲ’ ಎಂಬ ಪೋಸ್ಟ್‌ಗಳು, ಅದಕ್ಕೆ ಪೂರಕ ಎಂಬಂತೆ ಒಂದೆಡೆ ಖಾಲಿ ಕುರ್ಚಿಗಳು ಮಾತ್ರ ಕಾಣಿಸುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದರ ಹಿಂದಿನ ರಹಸ್ಯ ಇದೀಗ ಬಯಲಾಗಿದ್ದು, ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭಾಗಿಯಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಘಟಕ ಹಾಗೂ ಉಳ್ಳಾಲ ನಗರ ಯುವ ಕಾಂಗ್ರೆಸ್ ಘಟಕದ ವತಿಯಿಂದ ಶನಿವಾರ ಉಳ್ಳಾಲ ನಗರಸಭಾ ಮೈದಾನದಲ್ಲಿ ಯುವ ಮಿಲನ ಸಮಾವೇಶ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿತ್ತು. ಇದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಸ್ಥಳೀಯ ಶಾಸಕರೂ ಆಗಿರುವ ಆಹಾರ ಸಚಿವ ಯು.ಟಿ.ಖಾದರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಯಶಸ್ವಿಯಾಗಿ ನಡೆದ ಈ ಪ್ರತಿಭಟನಾ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳದೆ ನೋಟುಗಳನ್ನು ಅಮಾನ್ಯಗೊಳಿಸಿರುವ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಮೊದಲು ಸಂಘಟಿಸಲಾಗಿದ್ದ ರ್ಯಾಲಿಯಲ್ಲೂ ಭಾರೀ ಜನ ಸೇರಿದ್ದರು. ಆದರೆ ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಖಾಲಿಯಾಗಿದ್ದ ಕುರ್ಚಿಗಳು ಕಾಣುವಂತೆ ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರತಿಭಟನಾ ಸಮಾವೇಶಕ್ಕೆ ಜನ ಬೆಂಬಲವೇ ಸಿಗಲಿಲ್ಲ ಎಂದು ಬಿಂಬಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ ಎಂದು ಸಮಾವೇಶದ ಸಂಘಟಕರು ದೂರಿದ್ದಾರೆ.
ಸಮಾವೇಶದಲ್ಲಿ ಗಣ್ಯ ಅತಿಥಿಗಳು ಆಸೀನರಾಗುವುದಕ್ಕಿಂತ ಮೊದಲು ದೂರದಿಂದ ಸಭಾಂಗಣದಲ್ಲಿ ಖಾಲಿ ಕುರ್ಚಿಗಳೇ ಹೆಚ್ಚು ಕಾಣುವಂತೆ ವೇದಿಕೆಯ ಫೋಟೊ ತೆಗೆದು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಸಂಸದರೊಬ್ಬರು ಸೇರಿದಂತೆ ಹಲವರು ತಮ್ಮ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳ ಮೂಲಕ ಶೇರ್ ಮಾಡಿದ್ದಾರೆ. ಆದರೆ ಇದರ ಹಿಂದಿನ ವಾಸ್ತವವನ್ನು ಕಾಂಗ್ರೆಸ್ ಕಾರ್ಯಕರ್ತರು ಇದೀಗ ಬಹಿರಂಗಗೊಳಿಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನರು ಸಮಾವೇಶ ಹಾಗೂ ಅದಕ್ಕೂ ಮೊದಲು ನಡೆದ ರ್ಯಾಲಿಯಲ್ಲಿ ಭಾಗವಹಿಸಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಟೀಕಾಕಾರರ ಬಾಯಿಯನ್ನು ಮುಚ್ಚಿಸಿದ್ದಾರೆ.