ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟ: ಉಡುಪಿಗೆ ಸಮಗ್ರ ಪ್ರಶಸ್ತಿ
ಉಡುಪಿ, ನ.27: ಉಡುಪಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ವಳಕಾಡು ಪ್ರೌಢಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಅತಿಥೇಯ ಉಡುಪಿ ಜಿಲ್ಲಾ ತಂಡ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಸ್ಫರ್ಧೆಯಲ್ಲಿ ಬಾಲಕಿಯರ ತಂಡ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಾಲಕರ ತಂಡ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯು ಪಡೆದುಕೊಂಡಿತು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 1000ಕ್ಕೂ ಅಧಿಕ ಕ್ರೀಡಾಳುಗಳು ಕರಾಟೆ ಪ್ರದರ್ಶನ ನೀಡಿದರು.
ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ದಿನೇಶ್ ಗುಂಡೂ ರಾವ್ ಮಾತನಾಡಿ, ಕ್ರೀಡೆಯಿಂದ ಮಾತ್ರ ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆ ಸಾಧ್ಯ. ಕ್ರೀಡೆಯಿಂದ ಆತ್ಮವಿಶ್ವಾಸ ಮೂಡಿ ಭವಿಷ್ಯದಲ್ಲಿ ಬರುವ ಸಮಸ್ಯೆಗಳನ್ನು ಮಾನಸಿಕ ಹಾಗೂ ದೈಹಿಕವಾಗಿ ಎದುರಿಸಬಹುದಾಗಿದೆ ಎಂದು ತಿಳಿಸಿದರು.
ಮಕ್ಕಳನ್ನು ಭವಿಷ್ಯ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಸರಕಾರದ ಬಹಳ ಮುಖ್ಯ ಕರ್ತವ್ಯವಾಗಿದೆ. ಈ ಮೂಲಕ ಮಕ್ಕಳನ್ನು ದೇಶದ ಆಸ್ತಿ ಯನ್ನಾಗಿ ಮಾಡಬೇಕಾಗಿದೆ. ಮಾನವ ಸಂಪನ್ಮೂಲಗಳ ಸದ್ಬಳಕೆ ಇಂದು ನಮ್ಮ ದೇಶದ ಮುಂದೆ ಇರುವ ಬಹು ದೊಡ್ಡ ಸವಾಲು ಆಗಿದೆ. ಇದನ್ನು ಎದುರಿಸಿದರೆ ದೇಶ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ನಗರ ಸಭಾ ಸದಸ್ಯರಾದ ಗೀತಾ ರವಿ ಶೇಟ್, ಜನಾರ್ದನ್ ಭಂಡಾರ್ಕರ್, ಹಸನ್ ಅಜ್ಜರಕಾಡು, ರಮೇಶ್ ಕಾಂಚನ್, ಲಯನೆಸ್ ಸಂಯೋಜಕಿ ನಿರುಪಮಾ ಪ್ರಸಾದ್ ಶೆಟ್ಟಿ, ಉದ್ಯಮಿ ಶುೃತಿ ಶೆಣೈ, ಮಣಿಪಾಲ ಕೆಎಂಸಿ ಪ್ರೊ.ಡಾ.ಕೆ.ರಾಜಗೋಪಾಲ ಶೆಣೈ, ನಿವೃತ್ತ ಮೇಯರ್ ಕೆ.ವಿಶ್ವನಾಥ್ ನಾಯಕ್, ಉದ್ಯಮಿ ಪುರುಷೋತ್ತಮ ಶೆಟ್ಟಿ ಭಾಗವಹಿಸಿದ್ದರು.
ರಾಜ್ಯ ಕರಾಟೆ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಜಿಲ್ಲಾ ಕರಾಟೆ ಸಂಘದ ಅಧ್ಯಕ್ಷ ರವಿ ಸಾಲ್ಯಾನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್., ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಉಡುಪಿ ವಲಯ ದೈಹಿಕ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ, ಪ್ರಚಾರ ಸಮಿತಿಯ ಅಧ್ಯಕ್ಷ ರವಿರಾಜ್ ನಾಯಕ್, ಪ್ರಾಥಮಿಕ ಶಾಲಾ ಮುಖ್ಯೋಪಾಧಾಯಿನಿ ಕುಸುಮಾ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ಹೆಗ್ಡೆ ಉಪಸ್ಥಿತರಿದರು.
ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ಅಮೃತ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗ ಭೂಷಣ ಶೇಟ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲ ಬಿ. ವಂದಿಸಿದರು. ಅನಂತ್ ನಾಯಕ್ ವಿಜೇತರ ಪಟ್ಟಿ ಓದಿದರು. ವಿದ್ಯಾರ್ಥಿಗಳಾದ ಸುಷ್ಮಾ ಮತ್ತು ತೃಪ್ತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.