×
Ad

ಸುರತ್ಕಲ್‌ನಲ್ಲಿ ‘ಹರ್ಷ’ದ 13ನೆ ಮಳಿಗೆ ಉದ್ಘಾಟನೆ

Update: 2016-11-27 18:16 IST

ಮಂಗಳೂರು, ನ. 27: ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ 66ರ ಆರ್‌ಇಬಿ ಸಂಕೀರ್ಣದಲ್ಲಿ ವೈವಿಧ್ಯಮಯ ಉತ್ಪನ್ನಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆದ ‘ಹರ್ಷ’ದ 13ನೆ ಶಾಖೆ ರವಿವಾರ ಉದ್ಘಾಟನೆಗೊಂಡಿತು.

ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬ್ಲೋಸಂ ಫೆರ್ನಾಂಡಿಸ್, ಶಾಸಕ ಮೊದಿನ್ ಬಾವ, ಕಾರ್ಪೊರೇಟರ್ ಅಶೋಕ್ ಶೆಟ್ಟಿ, ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಫೀಲ್ಢ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಆರ್‌ಇಬಿ ಪ್ರೈ. ಲಿಮಿಟೆಡ್‌ನ ಆಡಳಿತ ನಿರ್ದೇಶಕ ಅಶೋಕ್ ರೈ, ಹರ್ಷ ಇದರ ವ್ಯವಸ್ಥಾಪಕ ನಿರ್ದೇಶಕ ಸೂರ್ಯಪ್ರಕಾಶ್, ನಿರ್ದೇಶಕರಾದ ಅಶೋಕ್ ಕುಮಾರ್, ಸುರೇಶ್, ರಾಜೇಶ್, ಹರೀಶ್ ಮತ್ತವರ ತಾಯಿ ಯಶೋಧಾ ಪೂಜಾರಿ ಉಪಸ್ಥಿತರಿದ್ದರು.

ದೀಪ ಬೆಳಗಿಸುವ ಮೂಲಕ ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಆಸ್ಕರ್ ಫೆರ್ನಾಂಡಿಸ್ ಅವರು, ಉಡುಪಿಯಿಂದ ಪ್ರಾರಂಭಗೊಂಡ ‘ಹರ್ಷ’ ಮಳಿಗೆಯು ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತಾರಗೊಳಿಸಿ ಇದೀಗ ಸುರತ್ಕಲ್‌ನಲ್ಲಿ 13ನೆ ಮಳಿಗೆಯ ಉದ್ಘಾಟನೆ ಗೊಳಿಸುತ್ತಿರುವುದು ಹರ್ಷದಾಯಕವಾಗಿದೆ. ಯೋಜನೆ ಹಲವಾರು ಇದ್ದರೂ ಪ್ರಾರಂಭವಾಗಿರುವ ಮಳಿಗೆಗಳನ್ನು ಉಳಿಸಿಕೊಳ್ಳಲು ಆದ್ಯತೆ ನೀಡಬೇಕೆಂದರು.

ಲಾಭ ಗಳಿಕೆಯೊಂದೇ ಗುರಿಯನ್ನು ಇಟ್ಟುಕೊಳ್ಳದೆ, ಗ್ರಾಹಕರ ಅಭಿರುಚಿಯನ್ನು ಮನಗಂಡು ಗುಣಮಟ್ಟದ ಉಪಕರಣಗಳ ಮಾರಾಟಗಳೊಂದಿಗೆ ಬ್ಯಾಂಕಿಂಗ್ ಸೌಲಭ್ಯ ಸಹಿತ ಉತ್ತಮ ಸೇವೆಯನ್ನು ಒದಗಿಸುತ್ತಿರುವ ‘ಹರ್ಷ’ ಮಾದರಿ ಸಂಸ್ಥೆಯಾಗಿದೆ ಎಂದು ಹೇಳಿದರಲ್ಲದೆ, ‘ಹರ್ಷ’ ಮಳಿಗೆಯ ಸ್ಥಾಪಕ ದಿವಂಗತ ಬೋಳ ಪೂಜಾರಿ ಅವರನ್ನು ಸ್ಮರಿಸುತ್ತಾ ಅವರ ಮಕ್ಕಳು ಮುನ್ನಡೆಸುತ್ತಿರುವ ‘ಹರ್ಷ’ ಇನ್ನೂ ಹೆಚ್ಚಿನ ಶಾಖೆಗಳನ್ನು ಹೊಂದುವಂತಾಗಲಿ ಎಂದು ಹಾರೈಸಿದರು.

ಶಾಸಕ ಮೊದಿನ್ ಬಾವ ಮಾತನಾಡಿ, ಬೆಳೆಯುತ್ತಿರುವ ಸುರತ್ಕಲ್ ಪ್ರದೇಶದಲ್ಲಿ ‘ಹರ್ಷ’ ತನ್ನ ಮಳಿಗೆಯನ್ನು ಉದ್ಘಾಟಿಸುವ ಮೂಲಕ ಕ್ಷೇತ್ರದ ಜನತೆಗೆ ಕೊಡುಗೆ ನೀಡಿದಂತಾಗಿದೆ. ‘ಹರ್ಷ’ ಪ್ರಗತಿಯನ್ನು ಸಾಧಿಸಿ ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆದು ಯಶಸ್ವೀ ಪಥದಲ್ಲಿ ಸಾಗುವಂತಾಗಲಿ ಎಂದು ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಪ್ರಕಾಶ್ ರಿಟೇಲ್ ಪ್ರೈ.ಲಿ. ಹಾಗೂ ‘ಹರ್ಷ’ದ ವ್ಯವಸ್ಥಾಪಕ ನಿರ್ದೇಶಕ ಸೂರ್ಯಪ್ರಕಾಶ್ ಕೆ., ಉಡುಪಿಯ ಪ್ರಕಾಶ್ ರಿಟೇಲ್ ಪ್ರೈ.ಲಿ. ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ‘ಹರ್ಷ’ವು 1987ರ ಮಾರ್ಚ್ 9ರಂದು ಉಡುಪಿಯಲ್ಲಿ ಪ್ರಥಮ ಮಳಿಗೆಯನ್ನು ಆರಂಭಿಸಿತ್ತು. ಗ್ರಾಹಕರ ಅಪಾರ ಬೆಂಬಲದೊಂದಿಗೆ ಇದೀಗ ಹರ್ಷವು ಕರಾವಳಿ ಕರ್ನಾಟಕದ ಮಂಗಳೂರು, ಪುತ್ತೂರು, ಕುಂದಾಪುರ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ಒಟ್ಟು 12 ಮಳಿಗೆಯನ್ನು ಹೊಂದುವಂತಾಯಿತು. ಗ್ರಾಹಕರಿಗೆ ತಮ್ಮ ಆಯ್ಕೆಯ ವಿಶ್ವ ವಿಖ್ಯಾತ ಬ್ರಾಂಡ್‌ನ ವಸ್ತು ವೈವಿಧ್ಯಗಳನ್ನು ಒಂದೇ ಸೂರಿನಡಿ ಖರೀದಿಸುವ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.

ನೂತನ ಮಳಿಗೆಯಲ್ಲಿ ವಿವಿಧ ಬ್ರಾಂಡ್‌ಗಳ ಎಲ್‌ಇಡಿ ಟಿವಿ, ರೆಫ್ರಿಜರೇಟರ್, ವಾಶಿಂಗ್ ಮೆಶಿನ್, ಏರ್‌ಕಂಡಿಶನರ್, ಮೈಕ್ರೋವೇವ್ ಓವನ್, ಮಿಕ್ಸರ್, ಗ್ರೈಂಡರ್, ಡಿವಿಡಿ ಪ್ಲೆಯರ್, ಆಡಿಯೊ ಸಿಸ್ಟಮ್, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟಾಬ್ಲೆಟ್ಸ್, ಡಿಜಿಟಲ್ ಕ್ಯಾಮೆರಾ, ಗ್ಯಾಸ್ ಸ್ಟೌ, ಕುಕ್‌ವೇರ್ಸ್‌, ವಾಟರ್ ಪ್ಯೂರಿಫೈರ್, ಫ್ಯಾನ್ಸ್ , ಐರನ್ ಬಾಕ್ಸ್, ಸ್ಟೆಬಿಲೈಸರ್, ವಾಟರ್ ಹೀಟರ್, ಪರ್ಸನಲ್ ಕೇರ್ ಸಹಿತ ಹಲವಾರು ವೈವಿಧ್ಯಮಯ ಉತ್ಪನ್ನಗಳ ಸಂಗ್ರಹ ಹೊಂದಿದೆ.

ಇದೇ ಸಂದರ್ಭದಲ್ಲಿ ಸುರತ್ಕಲ್‌ನ ಪ್ರಾಥಮಿಕ ಶಾಲೆಗೆ ಸಂಸ್ಥೆಯ ವತಿಯಿಂದ 50 ಸಾವಿರ ರೂ. ವೌಲ್ಯದ ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಲಾಯಿತು. ‘ಹರ್ಷ’ ಮಳಿಗೆಯ ಎಜಿಎಂ ನಾಗರಾಜ್ ಅಮೀನ್ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News