ದಾಖಲೆಗಳಿಲ್ಲದ 13 ಲಕ್ಷ ರೂ. ಸಹಿತ ಇಬ್ಬರು ವಶಕ್ಕೆ
ಮಂಗಳೂರು, ನ.27: ನಗರದ ನವಭಾರತ್ ಸರ್ಕಲ್ ಬಳಿಯ ಅಪಾರ್ಟ್‌ಮೆಂಟ್‌ವೊಂದರ ಬಳಿ ಸೂಕ್ತ ದಾಖಲೆಗಳಿಲ್ಲದ 13 ಲಕ್ಷ ರೂ.ವನ್ನು ವಶಪಡಿಸಿಕೊಂಡ ಸಿಸಿಬಿ ಪೊಲೀಸರು ಶನಿವಾರ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪುತ್ತೂರಿನ ಉಮರ್ ಫಾರೂಕ್ (41) ಮತ್ತು ಬಂಟ್ವಾಳ ಮೂಡ ನಿವಾಸಿ ಮುಹಮ್ಮದ್ ಬಶೀರ್ (32) ಪೊಲೀಸರ ವಶಕ್ಕೊಳಗಾದವರು.
ಇವರು ಅಪಾರ್ಟ್‌ಮೆಂಟ್‌ವೊಂದರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಆಲ್ಟೋ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇದ್ದುದನ್ನು ಕಂಡ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಈಗ ಚಾಲ್ತಿಯಲ್ಲಿರುವ ವಿವಿಧ ಮುಖಬೆಲೆಯ 13 ಲಕ್ಷ ರೂ. ನೋಟುಗಳಿರುವುದು ಪತ್ತೆಯಾಯಿತು. ಈ ಬಗ್ಗೆ ಯಾವುದೇ ದಾಖಲಾತಿ ಇರಲಿಲ್ಲ. ಅಕ್ರಮವಾಗಿ ಹಣವನ್ನಿಟ್ಟುಕೊಂಡಿರುವ ಬಗ್ಗೆ ಸಿಸಿಬಿ ಪೊಲೀಸರು ಹಣ ಸಮೇತ ಕಾರು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಸಿಸಿಬಿ ಘಟಕದ ಇನ್‌ಸ್ಪೆೆಕ್ಟರ್ ಸುನೀಲ್ ವೈ. ನಾಯಕ್, ಎಸ್ಸೈ ಶ್ಯಾಮ್ ಸುಂದರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.