ಪ್ರಜಾಪ್ರಭುತ್ವ ಪರ ನಿಲುವಿಗಾಗಿ ಬಾಜ್ವಾಗೆ ಒಲಿದ ಸೇನಾವರಿಷ್ಠ ಸ್ಥಾನ

Update: 2016-11-27 14:32 GMT

ಇಸ್ಲಾಮಾಬಾದ್,ನ.27: ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರಾಗಿ ಜನರಲ್ ಖಮರ್ ಬಾಜ್ವಾ ಅವರನ್ನು ಪ್ರಧಾನಿ ನವಾಝ್ ಶರೀಫ್ ನೇಮಕಗೊಳಿಸಲು ಅವರ ಪ್ರಜಾಪ್ರಭುತ್ವ ಪರ ನಿಲುವು ಹಾಗೂ ಪ್ರಚಾರದಿಂದ ದೂರವಿರುವ ವ್ಯಕ್ತಿತ್ವ ಕಾರಣವೆಂದು ಪಾಕಿಸ್ತಾನಿ ಮಾಧ್ಯಮಗಳು ಹಾಗೂ ತಜ್ಞರು ಅಭಿಪ್ರಾಯಿಸಿದ್ದಾರೆ.
 
ಜನರಲ್ ಬಾಜ್ವಾ ಅವರ ಪೂರ್ವಾಪರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅವರ ಪ್ರಜಾಪ್ರಭುತ್ವಪರ ನಿಲುವುಗಳೇ ಅವರನ್ನು ಸೇನಾ ಮುಖ್ಯಸ್ಥನ ಹುದ್ದೆಗೇರಿಸಿರುವುದಾಗಿ ಪಾಕಿಸ್ತಾನದ ‘ದಿ ನ್ಯೂಸ್’ ಪತ್ರಿಕೆ ವರದಿ ಮಾಡಿದೆ. ಸೇನಾ ಪರಿಣಿತನೂ ಹಾಗೂ ಪ್ರಜಾತಂತ್ರದ ಬೆಂಬಲಿಗನೂ ಆದ ಸೇನಾಧಿಕಾರಿಯನ್ನು ಸೇನಾವರಿಷ್ಠನನ್ನಾಗಿ ನೇಮಿಸಲು ಪ್ರಧಾನಿ ನವಾಝ್ ಶರೀಫ್ ಬಯಸಿದ್ದರೆಂದು ಪತ್ರಿಕೆ ತಿಳಿಸಿದೆ.
 ನಾಗರಿಕ ಸರಕಾರದ ಜೊತೆಗಿನ ಬಾಂಧವ್ಯದ ಬಗ್ಗೆ ಜನರಲ್ ಬಾಜ್ವಾ ಅವರಿಗಿರುವ ಸೌಮ್ಯವಾದಿ ನಿಲುವು, ಅವರನ್ನು ಸೇನಾಮುಖ್ಯಸ್ಥನ ಸ್ಥಾನಕ್ಕೇರಿಸಿದೆಯೆಂದು ಪಾಕಿಸ್ತಾನದ ಇನ್ನೊಂದು ಪ್ರಮುಖ ದಿನ ಪತ್ರಿಕೆ ಡಾನ್ ಪತ್ರಿಕೆ ವರದಿ ಮಾಡಿದೆ.
ಸೇನಾ ಮುಖ್ಯಸ್ಥನಾಗಿ ಭಡ್ತಿ ಪಡೆಯುವ ಮೂಲಕ ಜನರಲ್ ಬಾಜ್ವಾ ಅವು ಲೆ.ಜ. ಸೈಯದ್ ವಾಜಿದ್ ಹುಸೈನ್ (ಪಾಕಿಸ್ತಾನದ ಭಾರೀ ಕೈಗಾರಿಕೆಗಳ ತಕ್ಸಿಲಾದ ಅಧ್ಯಕ್ಷ0, ್ಞಲೆ.ಜ. ನಜೀಬುಲ್ಲಾ ಖಾನ್ ( ಸಿಬ್ಬಂದಿ ಮುಖ್ಯ ಕಾರ್ಯಾಲಯದ ಜಂಟಿ ಮಹಾನಿರ್ದೇಶಕ), ಲೆ.ಜ. ಇಶ್ಫಾಕ್ ನದೀಂ ಅಹ್ಮದ್ (ಕಾರ್ಪ್ಸ್ ಕಮಾಂಡರ್ ಮುಲ್ತಾನ್) ಹಾಗೂ ಲೆ.ಜ. ಜಾವೇದ್ ಇಕ್ಬಾಲ್ ರಾಮ್‌ದಯ್ (ಕಾರ್ಪ್ಸ್ ಕಮಾಂಡರ್ ಬಹಾಲ್‌ಪುರ್) ಅವರನ್ನು ಹಿಂದಕ್ಕೆ ಸರಿಸಿದಂತಾಗಿದೆ.

ಪಾಕಿಸ್ತಾನದ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಸಂಸದ ಲೆ.ಜ. (ನಿವೃತ್ತ) ಅಬ್ದುಲ್ ಖಯೂಮ್ ಅವರು ಜನರಲ್ ಬಾಜ್ವಾ ನೇಮಕವನ್ನು ಸಮರ್ಥಿಸಿದ್ದಾರೆ. ಸಂಸತ್‌ನ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟಿರುವ ಹಾಗೂ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ದೇಶದ ಒಳಿತಿಗಾಗಿ ಶ್ರಮಿಸುವ ವ್ಯಕ್ತಿಯನ್ನು ಸೇನಾವರಿಷ್ಠನನ್ನಾಗಿ ನೇಮಿಸಲು ಪ್ರಧಾನಿ ಬಯಸಿದ್ದರೆಂದು ಅವರು ಹೇಳಿದ್ದಾರೆ.

ಸೈನಿಕ ಬಲದಲ್ಲಿ ಜಗತ್ತಿನ ಆರನೆ ಅತಿ ದೊಡ್ಡ ಸೈನ್ಯವೆಂದು ಕರೆಸಿಕೊಂಡಿರುವ ಪಾಕ್ ಸೇನೆಯ ವರಿಷ್ಠರಾಗಿ ಜನರಲ್ ಬಾಜ್ವಾ ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಿರ್ಗಮನ ಸೇನಾವರಿಷ್ಠ ಜನರಲ್ ರಾಹೀಲ್ ಆ ದಿನವೇ ನಿವೃತ್ತರಾಗಲಿದ್ದಾರೆ.

ನಿಯೋಜಿತ ಸೇನಾವರಿಷ್ಠ ಬಜ್ವಾ ಅವರು ಇಂದು ಪ್ರಧಾನಿ ನವಾಝ್ ಶರೀಫ್‌ರನ್ನು ಭೇಟಿಯಾಗಿ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News